ಶಾಸಕರ ನಿಧಿಯಿಂದ ಭಟ್ಕಳ ತಾಲೂಕಿನ ಖಾಸಗಿ ಶಾಲಾ ಶಿಕ್ಷಕರಿಗೆ ಕೋವಿಡ್ ಪ್ಯಾಕೇಜ್ ನೀಡುವಂತೆ ಐಟಾ ಆಗ್ರಹ
ಭಟ್ಕಳ: ‘ಕೋರೊನಾ ಕಷ್ಟದಲ್ಲಿರುವ ಜನರೊಂದಿಗೆ ನಾನಿದ್ದೇನೆ’ ಎಂದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಹೇಳಿಕೆ ನೀಡಿದ ಬೆನ್ನಲ್ಲೆ ಭಟ್ಕಳ ತಾಲೂಕಿನ ಎಲ್ಲ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ಶಾಸಕರ ನಿಧಿಯಿಂದ ಕೋವಿಡ್ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಐಡಿಯಾಲ್ ಟೀಚರ್ಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಶಾಸಕ ಸುನಿಲ್ ನಾಯ್ಕರಿಗೆ ಆಗ್ರಹಿಸಿದ್ದಾರೆ.
ಈ ಕರಿತಂತೆ ಶಾಸಕ ಸುನಿಲ್ ನಾಯ್ಕರಿಗೆ ಪತ್ರವೊಂದನ್ನು ಬರೆದಿರುವ ಅವರು, ಕೋವಿಡ್-19 ಸೋಂಕಿನಿಂದಾಗಿ ಕಳೆದ ಮಾರ್ಚ 2020 ರಿಂದ ಇದುವರೆಗೆ ರಾಜ್ಯದ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಕೇವಲ 40% ಅಥವಾ 50% ವೇತನ ಪಡೆದು ಬದುಕಲು ಕಷ್ಟವಾಗದೆ ದಿನ ದೂಡುತ್ತಿದ್ದಾರೆ. ಕೆಲ ಬೆರಳಣಿಕೆಯ ಶಾಲೆಗಳು ಕಳೆದ 2 ತಿಂಗಳಿಂದ ಪೂರ್ಣ ಪ್ರಮಾಣದ ವೇತನ ನೀಡಿದ್ದನ್ನು ಬಿಟ್ಟರೆ ಶೇ.99% ಶಾಲೆಗಳು ಈಗಲೂ ಕೇವಲ 5-6 ಸಾವಿರ ವೇತನ ನೀಡುತ್ತಿದ್ದು ಇದರಿಂದಾಗಿ ಶಿಕ್ಷಕ ಸಮುದಾಯ ಮಾನಸಿಕ ವಾಗಿ ಕುಗ್ಗಿ ಹೋಗಿದ್ದಾರೆ. ಹಣ್ಣು, ಚಪ್ಪಲಿ, ಕಾರು ಚಾಲನೆ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಕೆಲ ಶಿಕ್ಷಕರು ಆತ್ಮಹತ್ಯೆಯನ್ನೂ ಮಾಡಿಕೊಂಡಿರುವ ಘಟನೆಗಳನ್ನು ನಾವು ಪತ್ರಿಕೆಗಳ ಮೂಲಕ ತಿಳಿದುಕೊಂಡಿದ್ದೇವೆ.
ಈ ನಿಟ್ಟಿನಲ್ಲಿ ತೆಲಂಗಾಣ ಸರ್ಕಾರವು ಬಹಳ ಮಹತ್ತರವಾದ ಯೋಜನೆಯೊಂದು ಪ್ರಕಟಿಸಿದ್ದು ಎಲ್ಲ ಅನುದಾನರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ಪ್ರತಿ ತಿಂಗಳು 2000 ರೂ ಹಾಗೂ 25ಕೆ.ಜಿ ಅಕ್ಕಿಯನ್ನು ನೀಡಲು ನಿರ್ಧರಿಸಿದೆ. ತಮ್ಮ ಮೂಲಕ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರರಲ್ಲಿ, ‘ನಮ್ಮ ರಾಜ್ಯದಲ್ಲೋ ತೆಲಂಗಾಣ ಮಾದರಿಯಲ್ಲಿ ಪ್ರತಿಯೊಬ್ಬ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ಪ್ರತಿ ತಿಂಗಳು ಕನಿಷ್ಠ 5000 ಸಾವಿರ ಹಾಗೂ ಪಡಿತರವನ್ನು ನೀಡಲು ಕ್ರಮ ವಹಿಸಬೇಕು, ಹಣವನ್ನು ನೇರವಾಗಿ ಶಿಕ್ಷಕರ ಖಾತೆಗೆ ಜಮಾ ಆಗುವಂತೆ ನೋಡಿಕೊಳ್ಳಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ಕೋವಿಡ್ ನಿರ್ನಾಮ ಆಗುವವರೆಗೆ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳು ಶಿಕ್ಷಕರಿಗೆ ವೇತನ ಕಡಿತಗೊಳಿಸದೇ ಪೂರ್ಣ ಪ್ರಮಾಣದ ವೇತನ ನೀಡುವಂತೆ ಕ್ರಮ ಜರಗಿಸಬೇಕೆಂದು ತಾವು ಸರ್ಕಾರದ ಮೇಲೆ ಒತ್ತಡ ಹೇರಬೇಕು, ಈ ಮೂಲಕ ಶಿಕ್ಷಕರ ಬದುಕಿಗೆ ಆಸರೆಯಾಗಬೇಕು’ ಎಂದು ಪತ್ರದಲ್ಲಿ ವಿನಂತಿಸಿಕೊಳ್ಳಲಾಗಿದೆ.
ಅಲ್ಲದೆ ಭಟ್ಕಳ ತಾಲೂಕಿನ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಶಾಸಕರ ಅನುದಾನದಡಿ ಕೋವಿಡ್ ಪ್ಯಾಕೇಜ್ ಘೋಷಣೆ ಮಾಡಬೇಕೆಂದು, ಸಮಸ್ತ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರ ಪರವಾಗಿ ಅಗ್ರಹ ವ್ಯಕ್ತಪಡಸಿದ್ದಾರೆ. ಐಟಾದ ಬೇಡಿಕೆಗೆ ಮಾಧ್ಯಮಿಕ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಬ್ಬಿರ್ ದಫೆದಾರ್ ಹಾಗೂ ಭಟ್ಕಳ ತಾಲೂಕು ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ್ ನಾಯ್ಕ ಬೆಂಬಲ ವ್ಯಕ್ತಪಡಿಸಿದ್ದಾರೆ.







