ಆಸಾರಾಮ್ ಬಾಪುವಿಗೆ ಕೊರೋನ ಪಾಸಿಟಿವ್

ಹೊಸದಿಲ್ಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವಿವಾದಾತ್ಮಕ ನಕಲಿ ದೇವಮಾನವ ಆಸಾರಾಮ್ ಬಾಪುಗೆ ಕೊರೋನ ಪಾಸಿಟಿವ್ ಆಗಿದ್ದು, ರಾಜಸ್ಥಾನದ ಜೋಧ್ಪುರ ನಗರದ ಎಂಡಿಎಂ ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಜೈಲಿನಲ್ಲಿರುವ ಇತರ 12 ಕೈದಿಗಳೊಂದಿಗೆ ಬಾಪುವಿಗೆ ಕೊರೋನ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿತ್ತು. 80 ವರ್ಷದ ಆಸಾರಾಮ್ ಅವರ ಆಮ್ಲಜನಕದ ಮಟ್ಟವು ತುಂಬಾ ಕಡಿಮೆಯಾಗಿತ್ತು. ನಂತರ ಅವರನ್ನು ಐಸಿಯುಗೆ ದಾಖಲಿಸಲಾಯಿತು.
ಈ ಸುದ್ದಿ ಕೇಳಿ ಅವರ ಬೆಂಬಲಿಗರು ಅನೇಕರು ಆಸ್ಪತ್ರೆಗೆ ತಲುಪಿದರು. ಆಸಾರಾಮ್ ಅವರನ್ನು ಜೋಧಪುರ ಏಮ್ಸ್ ಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆಸಾರಾಮ್ ಪ್ರಸ್ತುತ ಜೋಧ್ಪುರ ಜೈಲಿನಲ್ಲಿದ್ದಾರೆ. 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆಸಾರಾಮ್ ಗೆ ಎಸ್‌ಸಿ / ಎಸ್‌ಟಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.