ಖಾಸಗಿ ವೈದ್ಯಕೀಯ ಕಾಲೇಜುಗಳ ಶೇ.75ರಷ್ಟು ಬೆಡ್‍ಗಳನ್ನ ಸರಕಾರಕ್ಕೆ ನೀಡಲು ಸೂಚನೆ

ಬೆಂಗಳೂರು, ಮೇ 6: ನಗರದಲ್ಲಿನ ಬೆಡ್ ಕೊರತೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆ ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಭೆ ನಡೆಸಿದರು.
ಸಭೆಯ ನಂತರ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಸೋಂಕಿತರಿಗೆ ಬೆಡ್ ಸಮಸ್ಯೆಯಾಗದ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆಗಳನ್ನ ಸರಕಾರ ಮಾಡುತ್ತಿದೆ. ಶೀಘ್ರದಲ್ಲೇ ಈ ಸಮಸ್ಯೆ ಪರಿಹಾರ ಮಾಡಲು ಕಾರ್ಯಯೋಜನೆ ರೂಪಿಸಿದ್ದೇವೆ. ಆ ನಿಟ್ಟಿನಲ್ಲಿಯೇ ಇಂದು ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದೇವೆ. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಶೇ.75ರಷ್ಟು ಬೆಡ್ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಮೀಸಲಿಡುವಂತೆ ಸೂಚಿಸಲಾಗಿದೆ. ಅದಕ್ಕೆ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಖಾಸಗಿ ಮೆಡಿಕಲ್ ಕಾಲೇಜುಗಳು 1350 ಬೆಡ್ ಸರಕಾರಕ್ಕೆ ನೀಡಬೇಕಿದೆ. ಇಂದಿನ ಸಭೆಯಲ್ಲಿ ಈ ಕುರಿತಂತೆ ಮುಖ್ಯಸ್ಥರಿಗೆ ತಿಳಿಸಲಾಗಿದೆ. ಕೆಲವು ಖಾಸಗಿ ಕಾಲೇಜುಗಳ ಮುಖ್ಯಸ್ಥರು ಇಂದಿನ ಸಭೆಗೆ ಬಂದಿರುವುದಿಲ್ಲ. ಈ ಕುರಿತಂತೆ ಕಾರಣ ಕೇಳಿ ಮಾಹಿತಿ ಪಡೆಯುವಂತೆ ತಿಳಿಸಲಾಗಿದೆ. ಒಂದು ವೇಳೆ ಸ್ಪಷ್ಟನೆ ಸಿಗದಿದ್ದರೆ ಅಂತವರ ವಿರುದ್ಧ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಎಲ್ಲಾ ಆಸ್ಪತ್ರೆಗಳ ಬೆಡ್ ವ್ಯವಸ್ಥೆಯನ್ನು ಗಮನಿಸುವುದಕ್ಕೆ ಈಗಾಗಲೇ ಐಎಎಸ್ ಅಧಿಕಾರಿಗಳನ್ನ ನೇಮಿಸಲಾಗಿದೆ. ಆದಾಗ್ಯೂ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳ ಮಾಹಿತಿ ಸ್ಪಷ್ಟವಾಗಿ ದೊರೆಯುತ್ತಿಲ್ಲ. ಇದನ್ನೆಲ್ಲಾ ಸರಿಪಡಿಸುವ ನಿಟ್ಟಿನಲ್ಲಿ ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ ಅವರನ್ನ ಉಸ್ತುವಾರಿಯಾಗಿ ನೇಮಿಸಲಾಗಿದೆ. ಈ ಕುರಿತಂತೆ ಮುಖ್ಯ ಕಾರ್ಯದರ್ಶಿಗಳು ಅಧಿಕೃತವಾಗಿ ಆದೇಶ ಹೊರಡಿಸಲಿದ್ದಾರೆ. ಆ ನಂತರ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳ ಮಾಹಿತಿ ಬೆರಳ ತುದಿಯಲ್ಲಿಯೇ ಸಿಗುವಂತಾಗಲಿದೆ ಎಂದು ತಿಳಿಸಿದರು.
ಕೆಲವು ಖಾಸಗಿ ಆಸ್ಪತ್ರೆಗಳು ಇನ್ನೂ ಬೆಡ್‍ಗಳನ್ನು ಸರಕಾರಕ್ಕೆ ನೀಡಿಲ್ಲ. ರೋಗಿಗಳು ಸಾವನ್ನಪ್ಪಿದರು ಅವರ ಹೆಸರಿನಲ್ಲಿಯೇ ಬೆಡ್ ಮೀಸಲಿಟ್ಟು ವಂಚಿಸುವ ಕೆಲಸ ಮಾಡುತ್ತಿವೆ. ಈ ಕುರಿತಂತೆ ಚರ್ಚಿಸಲು ನಾಳೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಕರೆಯಲಾಗಿದೆ. ಆ ವೇಳೆ ಈ ಎಲ್ಲಾ ಸಂಗತಿಗಳನ್ನ ಚರ್ಚಿಸಿ ಬೆಡ್‍ಗಳನ್ನ ಸರಕಾರಕ್ಕೆ ನೀಡಲು ತಿಳಿಸಲಾಗುವುದು ಎಂದರು.







