ತೀವ್ರಗತಿಯಲ್ಲಿ ಸೋಂಕು ಪಸರಿಸಲು ಕಾರಣವಾದ ಕುಂಭಮೇಳದ ಪವಿತ್ರ ಸ್ನಾನ: ಆರೋಗ್ಯ ತಜ್ಞ ಡಾ. ಆಶಿಶ್ ಝಾ
Thewire.in ವರದಿ

ಹೊಸದಿಲ್ಲಿ, ಮೇ 6: ಈ ವರ್ಷದ ಮಾರ್ಚ್ ಮತ್ತು ಎಪ್ರಿಲ್ನಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದ ಪವಿತ್ರಸ್ನಾನದ ವಿಧಿಯು ಸಾಂಕ್ರಾಮಿಕ ರೋಗದ ಇತಿಹಾಸದಲ್ಲೇ ತೀವ್ರಗತಿಯ ಸೋಂಕು ಹರಡುವಿಕೆಯ ಮಾಧ್ಯಮವಾಗಿದೆ ಎಂದು ವಿಶ್ವದ ಪ್ರಮುಖ ಆರೋಗ್ಯತಜ್ಞರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ಡಾ. ಆಶೀಶ್ ಝಾ ಹೇಳಿದ್ದಾರೆ.
ಕುಂಭಮೇಳ ಮತ್ತು ಪವಿತ್ರಸ್ನಾನದಲ್ಲಿ ಸುಮಾರು 3 ಮಿಲಿಯನ್ ಜನತೆ ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಪಾಲ್ಗೊಂಡಿದ್ದು ಇದು ಕೊರೋನ ಸೋಂಕನ್ನು ತೀವ್ರಗತಿಯಲ್ಲಿ ಪ್ರಸರಿಸಿದೆ. ದೇಶದಲ್ಲಿರುವ ಸೋಂಕಿನ 2ನೇ ಅಲೆಯ ದೈನಂದಿನ ಸೋಂಕು ಪ್ರಕರಣ ಈಗಿರುವ ಪ್ರಮಾಣದಲ್ಲೇ ತಟಸ್ಥಗೊಳ್ಳುವ ಲಕ್ಷಣ ಕಾಣಿಸುತ್ತಿದೆ. ಆದರೆ ಈ ಖುಷಿಯ ವಿಷಯದಲ್ಲೂ ಬೇಸರದ ಸಂಗತಿಯೆಂದರೆ ದೈನಂದಿನ ಸೋಂಕಿನ ಪ್ರಕರಣ ಈಗ 3.5 ಲಕ್ಷದ ಮಟ್ಟದಲ್ಲಿದ್ದು ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ಇದೇ ಮಟ್ಟದಲ್ಲಿ ತಟಸ್ಥಗೊಳ್ಳುವ ಸಾಧ್ಯತೆಯಿದೆ ಎಂದು ಝಾ ಹೇಳಿದ್ದಾರೆ.
ಅಂಕಿ ಅಂಶದ ಕುರಿತು ಮೋದಿ ಸರಕಾರ ಪ್ರತಿಕ್ರಿಯಿಸಲು ವಿಫಲವಾಗಿರುವುದು ಅತ್ಯಂತ ಕಳವಳಕಾರಿಯಾಗಿದೆ. ಭಾರತವು ಸರಕಾರದಿಂದ ವಿವರಣೆ ಬಯಸುತ್ತಿದೆ ಎಂದು Thewire.in ಗೆ ನೀಡಿದ ಸಂದರ್ಶನದಲ್ಲಿ ಝಾ ಹೇಳಿದ್ದಾರೆ. ಝಾ ಅವರು ಬ್ರೌನ್ ಯುನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ಡೀನ್ ಆಗಿದ್ದಾರೆ.
ಕೊರೋನ ಸೋಂಕಿನ ವಿನಾಶಕಾರಿ ಹೊಸ ಪ್ರಬೇಧದ ಬಗ್ಗೆ ವಿಜ್ಞಾನಿಗಳು ಮಾರ್ಚ್ ತಿಂಗಳ ಆರಂಭದಲ್ಲೇ ಎಚ್ಚರಿಸಿದ್ದರು. ಆದರೆ ಎಚ್ಚೆತ್ತುಕೊಳ್ಳುವ ಬದಲು ಮಾರ್ಚ್ 7ರಂದು ಕೇಂದ್ರದ ಆರೋಗ್ಯ ಇಲಾಖೆ ‘ ದೇಶ ಕೊರೋನ ವಿರುದ್ಧದ ಹೋರಾಟದ ಅಂತಿಮ ಹಂತದಲ್ಲಿದೆ’ ಎಂದು ಘೋಷಿಸಿತು. ಫೆಬ್ರವರಿಯಲ್ಲಿ ಬಿಜೆಪಿಯ ನಿರ್ಣಯದಲ್ಲಿ ಭಾರತ ಕೊರೋನ ಸೋಂಕನ್ನು ಹಿಮ್ಮೆಟ್ಟಿಸಿದೆ ಎಂದು ಉಲ್ಲೇಖಿಸಲಾಗಿತ್ತು. ಜನವರಿಯಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಭಾರತವು ಕೊರೋನದ ನಿಯಂತ್ರಣದಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಿ ಬಡಾಯಿ ಕೊಚ್ಚಿಕೊಂಡಿದ್ದರು ಎಂದು ಝಾ ಹೇಳಿದ್ದಾರೆ.
ದೇಶದಲ್ಲಿ ದೈನಂದಿನ ಸೋಂಕು ಪ್ರಕರಣ 4,12,000( ಮೇ 5ರಂದು) ಎಂದು ಸರಕಾರ ಹೇಳುತ್ತಿದ್ದರೂ ಪರೀಕ್ಷೆ ನಡೆಸದ ಪ್ರಕರಣಗಳನ್ನೂ ಪರಿಗಣಿಸಿದರೆ ಇದು 15ರಿಂದ 20 ಲಕ್ಷದಷ್ಟು ಇರಬಹುದು. ದೈನಂದಿನ ಸೋಂಕು ಪ್ರಕರಣ ತಟಸ್ಥಗೊಳ್ಳುವ ಲಕ್ಷಣ ಮಹಾರಾಷ್ಟ್ರ ಮತ್ತು ದಿಲ್ಲಿಯಲ್ಲಿ ಗೋಚರಿಸಿದೆ. ಆದರೆ ಸೋಂಕು ಪರೀಕ್ಷೆಯ ಪ್ರಮಾಣ ಕಡಿಮೆಯಾಗಿರುವುದೂ ಪ್ರಕರಣ ತಟಸ್ಥಗೊಳ್ಳಲು ಕಾರಣವಾಗಿರಬಹುದು. ಈ ಹಿನ್ನೆಲೆಯಲ್ಲಿ ಮುಂದಿನ 6 ವಾರ ಅಥವಾ ಒಂದು ತಿಂಗಳು ಅತ್ಯಂತ ನಿರ್ಣಾಯಕವಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ 3ನೇ ಅಲೆಯ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂಬ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯರಾಘವನ್ ಹೇಳಿಕೆಯನ್ನು ಉಲ್ಲೇಖಿಸಿದ ಝಾ, ಭಾರತ 3ನೇ ಅಲೆಯನ್ನು ಒಪ್ಪಿಕೊಂಡಿರುವುದು ನಿಜಕ್ಕೂ ಒಳ್ಳೆಯ ವಿಷಯವಾಗಿದೆ. ಯಾಕೆಂದರೆ ಸೋಂಕಿನ 2ನೇ ಅಲೆ ದೇಶದಲ್ಲಿ ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಈ ಹಿಂದೆ ಪ್ರತಿಪಾದಿಸಿತ್ತು ಎಂದರು.
ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಿಸಿದರೆ ಭಾರತ 3ನೇ ಅಲೆಯನ್ನು ತಡೆಯಲು ಸಾಧ್ಯ. ಇನ್ನೂ 500 ಮಿಲಿಯನ್ ಜನರಿಗೆ ಲಸಿಕೆ ಹಾಕಬೇಕಿದೆ. ಲಸಿಕೆ ನೀಡಿಕೆಯಲ್ಲಿ ಭಾರತವು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಬ್ರಿಟನ್ ಸರಕಾರದ ಮಾದರಿಯನ್ನು ಅನುಸರಿಸುವುದು ಸೂಕ್ತ ಎಂದವರು ಹೇಳಿದ್ದಾರೆ.
ದೀರ್ಘಾವಧಿಯ ಲಾಕ್ಡೌನ್ ಅಗತ್ಯವಿಲ್ಲ
ಕೊರೋನ ಸೋಂಕು ನಿಯಂತ್ರಣಕ್ಕೆ ದೀರ್ಘಾವಧಿಯ ಲಾಕ್ಡೌನ್ ಖಂಡಿತಾ ಪರಿಹಾರವಲ್ಲ ಎಂದು ಆಶಿಶ್ ಝಾ ಹೇಳಿದ್ದಾರೆ. ಒಂದು ಕುಟುಂಬದ ಅಥವಾ ಮನೆಯ ಸದಸ್ಯರಲ್ಲದವರು ಒಂದೆಡೆ ಗುಂಪು ಸೇರುವುದನ್ನು ತಪ್ಪಿಸುವುದು ಈಗಿನ ಅಗತ್ಯವಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.







