ಕೋವಿಡ್ ಭ್ರಷ್ಟಾಚಾರ ಕುರಿತು ಚಕಾರ ಎತ್ತದ ಲೋಕಾಯುಕ್ತ ವಿಶ್ವನಾಥ ಶೆಟ್ಟಿ ರಾಜೀನಾಮೆ ನೀಡಲಿ: ರವಿಕೃಷ್ಣಾ ರೆಡ್ಡಿ

ಬೆಂಗಳೂರು, ಮೇ 6: ಕೋವಿಡ್ ಸಂಕಷ್ಟದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲಿ ಸರಕಾರಿ ಕಚೇರಿ ಮತ್ತು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡದೆ ನಿರ್ಲಕ್ಷ್ಯ ತೋರುತ್ತಿರುವ ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಕೂಡಲೇ ರಾಜೀನಾಮೆ ನೀಡಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್‍ನಿಂದಾಗಿ ರಾಜ್ಯದ ಪ್ರತಿಯೊಬ್ಬರು ಸಾವುನೋವುಗಳನ್ನು ಅನುಭವಿಸುತ್ತಿದ್ದಾರೆ. ಇದರ ನಡುವೆ ಜನತೆಗೆ ಸಮರ್ಪಕ ರೀತಿಯಲ್ಲಿ ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ. ವ್ಯವಸ್ಥೆಯಲ್ಲಿ ಎಲ್ಲ ಲೋಪಗಳಾಗಿವೆ ಎಂದು ಗುರುತಿಸಿ, ಸರಿಪಡಿಸಬೇಕಾದ ಸ್ಥಾನದಲ್ಲಿರುವ ಲೋಕಾಯುಕ್ತರು ನಿರ್ಲಕ್ಷ್ಯ ಮನೋಭಾವ ತಾಳಿದ್ದಾರೆಂದು ಆರೋಪಿಸಿದ್ದಾರೆ.
ಲೋಕಾಯುಕ್ತ ಸಂಸ್ಥೆಗೆ ತನ್ನದೇ ಆದ ಇತಿಹಾಸವಿದೆ. ಜನತೆ ಇಂದಿಗೂ ಲೋಕಾಯುಕ್ತ ಸಂಸ್ಥೆಯ ಮೇಲೆ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಆದರೆ, ವಿಶ್ವನಾಥ ಶೆಟ್ಟಿ ಅಂತವರು ಆ ಸ್ಥಾನದಲ್ಲಿ ಕೂತ ನಂತರ ಘನತೆ ಕುಸಿಯುತ್ತಿದೆ. ಕೋವಿಡ್‍ನಂತಹ ಸಂದರ್ಭದಲ್ಲೂ ತಮ್ಮ ಕರ್ತವ್ಯವನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದೆಂದು ಅವರು ಅಭಿಪ್ರಾಯಿಸಿದ್ದಾರೆ.





