ಗುಜರಾತ್: ಕೊರೋನ ನಾಶಕ್ಕೆ ಮೆರವಣಿಗೆ ನಡೆಸಿದ 46 ಜನರ ಬಂಧನ

ಅಹ್ಮದಾಬಾದ್, ಮೇ 6: ಗುಜರಾತ್ನ ಗಾಂಧೀನಗರ ಜಿಲ್ಲೆಯಲ್ಲಿ ಕೊರೋನ ಸೋಂಕನ್ನು ನಾಶಗೊಳಿಸಲು ಧಾರ್ಮಿಕ ಮೆರವಣಿಗೆ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ 46 ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಕೆಲ ದಿನಗಳ ಹಿಂದೆಯೂ ರಾಜ್ಯದಲ್ಲಿ ಇಂತಹುದೇ ಘಟನೆ ನಡೆದಿತ್ತು.
ರಾಯ್ಪುರ ಗ್ರಾಮದಲ್ಲಿ ಬುಧವಾರ ನಡೆದ ಮೆರವಣಿಗೆಯಲ್ಲಿ ಕೊರೋನ ಸೋಂಕಿಗೆ ಸಂಬಂಧಿಸಿದ ಎಲ್ಲಾ ನಿಯಮಾವಳಿಗಳನ್ನೂ ಉಲ್ಲಂಘಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಎಂಕೆ ರಾಣಾ ಹೇಳಿದ್ದಾರೆ. ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸುಮಾರು 100 ಮಂದಿಯಲ್ಲಿ ಹಲವರು ಮಾಸ್ಕ್ ಧರಿಸಿರಲಿಲ್ಲ. ಮಹಿಳೆಯರು ತಲೆಯ ಮೇಲೆ ನೀರಿನ ಕೊಡಪಾನ ಹೊತ್ತುಕೊಂಡಿದ್ದರೆ ಪುರುಷರು ಡೋಲು ಬಡಿಯುತ್ತಾ ಮುಂಚೂಣಿಯಲ್ಲಿ ಸಾಗುತ್ತಿರುವ ವೀಡಿಯೋ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸ್ಥಳೀಯ ದೇವಸ್ಥಾನವನ್ನು ನೀರಿನಿಂದ ಶುದ್ಧಗೊಳಿಸಿದರೆ ಕೊರೋನದಂತಹ ಸಾಂಕ್ರಾಮಿಕ ರೋಗ ನಾಶವಾಗುತ್ತದೆ ಎಂಬ ನಂಬಿಕೆ ಈ ಸಮುದಾಯದವರಲ್ಲಿದೆ. ಘಟನೆಯ ಬಗ್ಗೆ ಮಾಹಿತಿ ದೊರೆತೊಡನೆ ಮೆರವಣಿಗೆ ಆಯೋಜಿಸಿದ್ದ 46 ಮಂದಿಯನ್ನು ಬಂಧಿಸಲಾಗಿದೆ. ಜನ ಗುಂಪುಗೂಡುವುದನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಮೇ 3ರಂದು ಇದೇ ರೀತಿಯ ಘಟನೆ ಅಹ್ಮದಾಬಾದ್ನ ನವಪುರ ಗ್ರಾಮದಲ್ಲಿ ನಡೆದಿತ್ತು. ಇದಕ್ಕೆ ಸಂಬಂಧಿಸಿ ಗ್ರಾಮದ ಮುಖ್ಯಸ್ಥನ ಸಹಿತ 23 ಜನರನ್ನು ಪೊಲೀಸರು ಬಂಧಿಸಿದ್ದರು.