ಆಗದು ಎಂದರೆ ಬೇಡ ಎಂದರ್ಥ: ಅತ್ಯಾಚಾರ ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ
ಶಿಮ್ಲ, ಮೇ 6: ಆಗದು ಎಂದರೆ ಬೇಡ ಎಂದೇ ಅರ್ಥ. ಕೆಲವರಿಗೆ ಸರಳವಾಗಿ ಹೇಳಿದರೂ ಯಾಕೆ ಅರ್ಥವಾಗುವುದಿಲ್ಲ ಎಂದು ಅತ್ಯಾಚಾರ ಆರೋಪಿಯನ್ನು ನ್ಯಾಯಾಧೀಶರು ತರಾಟೆಗೆತ್ತಿಕೊಂಡ ಘಟನೆ ಹಿಮಾಚಲ ಪ್ರದೇಶ ನ್ಯಾಯಾಲಯದಲ್ಲಿ ನಡೆದಿದೆ. ಡಿಸೆಂಬರ್ 17ರಂದು 17 ವರ್ಷದ ಹುಡುಗಿ ಬಸ್ಸಿಗೆಂದು ಕಾಯುತ್ತಿದ್ದಾಗ ಆಕೆಗೆ ಪರಿಚಿತನಾಗಿದ್ದ ಆರೋಪಿ ತನ್ನ ಜೀಪ್ನಲ್ಲಿ ಮನೆಗೆ ಬಿಡುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ಹುಡುಗಿಯ ಮನೆಯವರು ದೂರು ದಾಖಲಿಸಿದ್ದು ಆರೋಪಿಯನ್ನು ಮರುದಿನ ಬಂಧಿಸಲಾಗಿತ್ತು.
ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಧೀಶರು ‘ ಆರೋಪಿ ಅತ್ಯಾಚಾರಕ್ಕೆ ಮುಂದಾದಾಗ ಹುಡುಗಿ ಬೇಡ ಎಂದು ತಡೆದಿದ್ದಾಳೆ. ಆದರೂ ಆತ ಅತ್ಯಾಚಾರ ನಡೆಸಿದ್ದು ಬಳಿಕ ತನ್ನನ್ನು ಮದುವೆಯಾಗುವಂತೆ ಹುಡುಗಿಯನ್ನು ಒತ್ತಾಯಿಸಿದ್ದಾನೆ. ಆಗಲೂ ಆಕೆ ಆಗದು ಎಂದುತ್ತರಿಸಿದ್ದಾಳೆ. ಬೇಡ ಎಂದರೆ ಬೇಡ ಎಂದರ್ಥ. ಇದು ಸರಳ ಪದ. ಬೇಡ ಎಂದರೆ ಆಯಿತು ಎಂದು ಭಾವಿಸಬಾರದು. ಹುಡುಗಿ ನಾಚಿಕೆಯಿಂದ ಬೇಡ ಎಂದಿದ್ದಾಳೆ. ಆಕೆ ತನ್ನ ಮನವೊಲಿಸುವಂತೆ ಪರೋಕ್ಷವಾಗಿ ನಾಚಿಕೆ ವ್ಯಕ್ತಪಡಿಸಿದ್ದಾಳೆ ಎಂದು ಭಾವಿಸಬಾರದು. ಬೇಡ ಎಂಬ ಪದಕ್ಕೆ ಬೇರೆ ವ್ಯಾಖ್ಯಾನದ ಅಗತ್ಯವಿಲ್ಲ’ ಎಂದು ನ್ಯಾಯಾಧೀಶ ಅನೂಪ್ ಚಿತ್ಕಾರ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಹುಡುಗಿಗೆ ಇಷ್ಟವಿದ್ದರೆ ಆಕೆ ಅತ್ಯಾಚಾರದ ಘಟನೆಯನ್ನು ತಾಯಿಗೆ ತಿಳಿಸದೆ ಸುಮ್ಮನಿರಬಹುದಿತ್ತು. ಇಲ್ಲಿ ಸಂತ್ರಸ್ತೆಯ ಧೈರ್ಯವನ್ನು ಮೆಚ್ಚಬೇಕು. ಆಕೆ ಧೈರ್ಯದಿಂದ ಮುಂದೆ ಬಂದು ದೂರು ದಾಖಲಿಸಿದ್ದಾಳೆ. ಪ್ರತಿರೋಧ ತೋರದಿರುವುದು ಅಥವಾ ಇಷ್ಟವಿಲ್ಲದಿದ್ದರೂ ಸುಮ್ಮನಿರುವುದನ್ನು ಯಾವುದೇ ಭಾಷೆಯಲ್ಲೂ ಸಮ್ಮತಿ ಎಂದು ವ್ಯಾಖ್ಯಾನಿಸಲಾಗದು ಎಂದು ಹೇಳಿದ ನ್ಯಾಯಾಧೀಶರು ಆರೋಪಿಗೆ ಜಾಮೀನು ನಿರಾಕರಿಸಿದ್ದಾರೆ.







