ಆಮ್ಲಜನಕ ಸಾಂದ್ರಕಗಳು ಕಸ್ಟಮ್ಸ್ ಪ್ರಾಧಿಕಾರದಲ್ಲಿ ಬಾಕಿಯಾಗಿಲ್ಲ: ಕೇಂದ್ರದ ಸ್ಪಷ್ಟನೆ
ಹೊಸದಿಲ್ಲಿ, ಮೇ 6: ವಿದೇಶದಿಂದ ನೆರವಿನ ರೂಪದಲ್ಲಿ ಲಭಿಸಿರುವ ಆಮ್ಲಜನಕ ಸಾಂದ್ರಕಗಳು ಕಸ್ಟಮ್ಸ್ ಪ್ರಾಧಿಕಾರದ ಗೋದಾಮಿನಲ್ಲಿ ಬಾಕಿಯಾಗಿದೆ ಎಂಬ ವರದಿಯನ್ನು ನಿರಾಕರಿಸಿರುವ ಕೇಂದ್ರ ಸರಕಾರ, ಆಮ್ಲಜನಕ ಸಾಂದ್ರಕಗಳನ್ನು ಸೂಕ್ತವಾಗಿ ಮತ್ತು ತ್ವರಿತವಾಗಿ ವಿಲೇವಾರಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಕೊರೋನ ಸೋಂಕಿನ ಎರಡನೇ ಅಲೆ ವಿರುದ್ಧ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ಸಹಾಯದಿಂದ ಕೇಂದ್ರ ಸರಕಾರ ನಡೆಸುತ್ತಿರುವ ಹೋರಾಟಕ್ಕೆ ನೆರವಿನ ರೂಪದಲ್ಲಿ ಒಟ್ಟು 3,000 ಆಮ್ಲಜನಕ ಸಾಂದ್ರಕಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಚೀನಾದಿಂದ 1,000, ಐರ್ಲ್ಯಾಂಡ್ನಿಂದ 700, ಬ್ರಿಟನ್ನಿಂದ 669, ಮಾರಿಷಸ್ನಿಂದ 200, ತೈವಾನ್ನಿಂದ 150, ರೊಮಾನಿಯಾದಿಂದ 80, ಥೈಲ್ಯಾಂಡ್ನಿಂದ 30, ರಶ್ಯಾದಿಂದ 20 ಸಾಂದ್ರಕಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ.
ವಿದೇಶದಿಂದ ಲಭಿಸಿದ ಸಾಂದ್ರಕಗಳು ಕಸ್ಟಮ್ಸ್ ಪ್ರಾಧಿಕಾರದ ಗೋದಾಮಿನಲ್ಲಿ ಬಾಕಿಯಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ಆಧಾರರಹಿತ ಮತ್ತು ಕಪೋಲ ಕಲ್ಪಿತ ವರದಿಯಾಗಿದೆ. ಕಸ್ಟಮ್ಸ್ ಪ್ರಾಧಿಕಾರದ ಗೋದಾಮಿನಲ್ಲಿ ಸಾಂದ್ರಕಗಳು ಬಾಕಿಯಾಗಿಲ್ಲ ಎಂದು ಪ್ರಾಧಿಕಾರ ಈಗಾಗಲೇ ಸ್ಪಷ್ಟಪಡಿಸಿದೆ . ಆಮ್ಲಜನಕ ಸಾಂದ್ರಕಗಳನ್ನು ನಿಗದಿತ ಸ್ಥಳಕ್ಕೆ ರವಾನಿಸಲಾಗಿದೆ. ವಿಮಾನಗಳ ಮೂಲಕ ಮತ್ತು ರಸ್ತೆ ಸಾರಿಗೆ ಮೂಲಕ ರವಾನಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ದೇಶದಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದ ಸಾಮಾಗ್ರಿಗಳ ತುರ್ತು ಅಗತ್ಯದ ಬಗ್ಗೆ ಭಾರತೀಯ ಕಸ್ಟಮ್ಸ್ ವಿಭಾಗ ಸೂಕ್ಷ್ಮಗ್ರಾಹಿಯಾಗಿದ್ದು ಆಮ್ಲಜನಕ, ಆಮ್ಲಜನಕ ಸಾಂದ್ರಕಗಳ ಸಹಿತ ವೈದ್ಯಕೀಯ ಸಾಮಾಗ್ರಿಗಳನ್ನು ಗಮ್ಯ ಸ್ಥಾನಕ್ಕೆ ತಲುಪಿಸಲು 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ವಿದೇಶದಿಂದ ಆಗಮಿಸುವ ಸರಕನ್ನು ಗಂಟೆಯೊಳಗೆ ವಿಲೇವಾರಿ ಮಾಡಲಾಗುತ್ತದೆ . ಕೋವಿಡ್ ಸೋಂಕಿಗೆ ಸಂಬಂಧಿಸಿದ ಔಷಧೀಯ ಸಾಮಾಗ್ರಿಗಳ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿದೇಶದಿಂದ ರವಾನೆಯಾದ ಬಗ್ಗೆ ಇ-ಮೇಲ್ ಮೂಲಕ ಮಾಹಿತಿ ದೊರೆತೊಡನೆ ನೋಡಲ್ ಅಧಿಕಾರಿ ಇವುಗಳ ವಿಲೇವಾರಿಗೆ ಉಪಕ್ರಮ ಆರಂಭಿಸುತ್ತಾರೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.
ಕಸ್ಟಮ್ಸ್ ಪ್ರಾಧಿಕಾರದ ಗೋದಾಮಿನಲ್ಲಿ 3,000 ಆಮ್ಲಜನಕ ಸಾಂದ್ರಕಗಳು ಬಾಕಿಯಾಗಿವೆ ಎಂಬ ವರದಿಯ ಬಗ್ಗೆ ದಿಲ್ಲಿ ಹೈಕೋರ್ಟ್ ವಿಚಾರಣೆ ನಡೆಸಿದ ಸಂದರ್ಭ ಸ್ಪಷ್ಟನೆ ನೀಡಿದ್ದ ಕೇಂದ್ರ ಸರಕಾರ, ಯಾವುದೇ ಸರಕು ಬಾಕಿಯಾಗಿಲ್ಲ ಎಂದು ಹೇಳಿತ್ತು. ಮೇ 3ರಂದು ವಿತ್ತ ಇಲಾಖೆಯೂ ಇದೇ ಸ್ಪಷ್ಟನೆ ನೀಡಿತ್ತು. ಕಸ್ಟಮ್ಸ್ ಪ್ರಾಧಿಕಾರದ ಗೋದಾಮಿನಲ್ಲಿ ಯಾವುದೇ ಸರಕು ಬಾಕಿಯಾಗಿಲ್ಲ. ಆದರೆ ಟ್ವಿಟರ್ನಲ್ಲಿ ಫೋಟೋ ಸಹಿತ ವರದಿ ಪ್ರಕಟವಾಗಿರುವುದರಿಂದ, ಸರಕು ಯಾವ ಗೋದಾಮಿನಲ್ಲಿ ಬಾಕಿಯಿದೆ ಎಂದು ಯಾರಿಗಾದರೂ ಮಾಹಿತಿಯಿದ್ದರೆ ಇಲಾಖೆಗೆ ತಿಳಿಸಬಹುದು. ಆಗ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿತ್ತ ಇಲಾಖೆ ಹೇಳಿದೆ.







