ಭಾರತದಲ್ಲಿ ಕೋವಿಡ್‌ಗೆ ಪ್ರತಿ ಗಂಟೆಗೆ 150 ಮಂದಿ ಬಲಿ!

ಹೊಸದಿಲ್ಲಿ, ಮೇ 7: ಭಾರತದಲ್ಲಿ ಗುರುವಾರ 4.14 ಲಕ್ಷ ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದುವರೆಗಿನ ಗರಿಷ್ಠ ಸಂಖ್ಯೆ ಇದಾಗಿದೆ. 24 ಗಂಟೆಗಳಲ್ಲಿ 3,927 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸತತ 10ನೇ ದಿನ ಮೂರು ಸಾವಿರಕ್ಕಿಂತ ಅಧಿಕ ಸಾವು ವರದಿಯಾಗಿದ್ದು, ಈ ಅವಧಿಯಲ್ಲಿ 36,110 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಅಂದರೆ ಕಳೆದ ಹತ್ತು ದಿನಗಳ ಅವಧಿಯಲ್ಲಿ ಗಂಟೆಗೆ 150 ಮಂದಿಯಂತೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದು ವಿಶ್ವದಲ್ಲೇ 10 ದಿನಗಳ ಅವಧಿಯಲ್ಲಿ ದಾಖಲಾದ ಗರಿಷ್ಠ ಸಾವಿನ ಸಂಖ್ಯೆಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ, ಈ ಹಿಂದೆ ಹತ್ತು ದಿನಗಳ ಅವಧಿಯಲ್ಲಿ ಗರಿಷ್ಠ ಸಾವು ಸಂಭವಿಸಿದ್ದು ಅಮೆರಿಕದಲ್ಲಿ. ಅಮೆರಿಕದಲ್ಲಿ ಸತತ 10 ದಿನಗಳಲ್ಲಿ ಗರಿಷ್ಠ ಅಂದರೆ 34,798 ಮಂದಿ ಸೋಂಕಿಗೆ ತುತ್ತಾಗಿದ್ದರೆ, ಬ್ರೆಝಿಲ್‌ನಲ್ಲಿ 32,692 ಮಂದಿ ಜೀವ ಕಳೆದುಕೊಂಡಿದ್ದರು. ಮೆಕ್ಸಿಕೊ ಹಾಗೂ ಬ್ರಿಟನ್‌ನಲ್ಲಿ ಈ ಅವಧಿಯಲ್ಲಿ ಕ್ರಮವಾಗಿ 13,897 ಮತ್ತು 13,266 ಮಂದಿ ಸೋಂಕಿನಿಂದ ಮೃತಪಟ್ಟಿದ್ದರು.
ಗುರುವಾರ ದೇಶದಲ್ಲಿ 4,14,554 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಭಾರತದಲ್ಲಿ ಬುಧವಾರ ದಾಖಲಾದ 4,12,784ಕ್ಕಿಂತ ಅಧಿಕ. 13 ರಾಜ್ಯಗಳು 100ಕ್ಕೂ ಹೆಚ್ಚು ಸಾವು ಕಂಡಿದ್ದರೆ, ಆರು ರಾಜ್ಯಗಳಲ್ಲಿ ಇದುವರೆಗಿನ ಗರಿಷ್ಠ ಸಾವು ಗುರುವಾರ ದಾಖಲಾಗಿದೆ. ದೇಶದಲ್ಲೇ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ, ಇತ್ತೀಚೆಗೆ ಕುಂಭಮೇಳ ನಡೆದ ಉತ್ತರಾಖಂಡದಲ್ಲಿ 151 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ 853 ಮಂದಿ ಸಾವಿಗೀಡಾಗಿದ್ದು, ಉತ್ತರ ಪ್ರದೇಶ, ದಿಲ್ಲಿ ಹಾಗೂ ಕರ್ನಾಟಕದಲ್ಲಿ ತಲಾ 300ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಛತ್ತೀಸ್‌ಗಢದಲ್ಲಿ ದಿನದ ಸಾವಿನ ಸಂಖ್ಯೆ 200ರ ಗಡಿದಾಟಿದೆ.
ದೇಶದಲ್ಲಿ ಸತತ 16ನೇ ದಿನ 3 ಲಕ್ಷಕ್ಕಿಂತ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. 11 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗಿನ ಗರಿಷ್ಠ ಪ್ರಕರಣ ಗುರುವಾರ ವರದಿಯಾಗಿದೆ. ಈ ಪೈಕಿ ಕೇರಳ (42,464), ತಮಿಳುನಾಡು (24,898), ಪಶ್ಚಿಮ ಬಂಗಾಳ (18,431) ಸೇರಿವೆ.