ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಟೀಮ್ ಇಂಡಿಯಾ ಪ್ರಕಟ
ರವೀಂದ್ರ ಜಡೇಜ, ಜಸ್ ಪ್ರೀತ್ ಬುಮ್ರಾ ವಾಪಸ್

ಹೊಸದಿಲ್ಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ 18 ಸದಸ್ಯರನ್ನುಒಳಗೊಂಡ ತಂಡವನ್ನು ಶುಕ್ರವಾರ ಘೋಷಿಸಿದೆ.
ರವೀಂದ್ರ ಜಡೇಜ ಹಾಗೂ ಜಸ್ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗಿದ್ದಾರೆ. ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದ ಹನುಮ ವಿಹಾರಿ ಕೂಡ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.
ಕೆ.ಎಲ್. ರಾಹುಲ್ ಹಾಗೂ ವೃದ್ಧಿಮಾನ್ ಸಹಾ ಅವರನ್ನು ಆಯ್ಕೆಗಾರರು ತಂಡಕ್ಕೆ ಹೆಸರಿಸಿದ್ದಾರೆ. ಆದರೆ ಅವರ ಸೇರ್ಪಡೆ ಫಿಟ್ನೆಸ್ ಕ್ಲಿಯರೆನ್ಸ್ಗೆ ಒಳಪಟ್ಟಿರುತ್ತದೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಇಂಗ್ಲೆಂಡ್ ವಿರುದ್ಧದ ಸ್ವದೇಶಿ ಟೆಸ್ಟ್ ಸರಣಿಯ ಭಾಗವಾಗಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಲೆಗ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕೈಬಿಡಲಾಗಿದೆ.
ಬಿಸಿಸಿಐ ಮೂರು ಮೀಸಲು ಆಟಗಾರರನ್ನು ಹೆಸರಿಸಿದೆ - ಅಭಿಮನ್ಯು ಈಶ್ವರನ್, ಪ್ರಸಿದ್ಧ ಕೃಷ್ಣ, ಅವೇಶ್ ಖಾನ್, ಅರ್ಜನ್ ನಾಗ್ವಾಸ್ವಾಲ್ಲಾ - ಅವರು ಇಂಗ್ಲೆಂಡ್ಗೆ ವಿಮಾನ ಹತ್ತಲಿದ್ದಾರೆ.
ಪ್ರಸಿದ್ಧ ಕೃಷ್ಣ ಅವರು ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಯ ಚೊಚ್ಚಲ ಪಂದ್ಯದಲ್ಲಿ ಎಲ್ಲರನ್ನೂ ಆಕರ್ಷಿಸಿದರು, ಆದರೆ ಐಪಿಎಲ್ 2021 ರ ಅವಧಿಯಲ್ಲಿ ಅವೇಶ್ ಖಾನ್ ದಿಲ್ಲಿ ಕ್ಯಾಪಿಟಲ್ಸ್ನ ಪರ ಉತ್ತಮ ಬೌಲರ್ ಆಗಿ ಹೊರಹೊಮ್ಮಿದ್ದರು.
ಭಾರತದ ಟೆಸ್ಟ್ ತಂಡ:
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ ಪ್ರಿತ್ ಬುಮ್ರಾ, ಇಶಾಂತ್ ಶರ್ಮಾ, ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್ ಹಾಗೂ ಉಮೇಶ್ ಯಾದವ್.