ಅಂತರ್ ರಾಜ್ಯ ಪ್ರಯಾಣಕ್ಕೆ ಕೋವಿಡ್ ಪರೀಕ್ಷೆ ಪ್ರಮಾಣಪತ್ರ ಅಗತ್ಯವಿಲ್ಲ: ಐಸಿಎಂಆರ್

ಹೊಸದಿಲ್ಲಿ, ಮೇ 7: ಆರೋಗ್ಯವಂತ ನಾಗರಿಕರು ರಾಜ್ಯದೊಳಗೆ ಪ್ರಯಾಣಿಸಬೇಕಿದ್ದರೆ ಆರ್‌ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಸಲ್ಲಿಸಬೇಕು
ಎಂಬ ಸೂಚನೆಯನ್ನು ಸಂಪೂರ್ಣ ರದ್ದುಗೊಳಿಸಬಹುದಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಹೇಳಿದೆ. ದೇಶದಲ್ಲಿ
ಕೊರೋನ ಸೋಂಕಿನ ಎರಡನೇ ಅಲೆ ತೀವ್ರಗತಿಯಲ್ಲಿ ಹೆಚ್ಚಿರುವುದರಿಂದ ಪ್ರಯೋಗಾಲಯದಲ್ಲಿ ಹೆಚ್ಚಿನ ಒತ್ತಡ ನಿವಾರಿಸುವ ದೃಷ್ಟಿಯಿಂದ ಹೀಗೆ
ಮಾಡಬಹುದು ಎಂದು ಐಸಿಎಂಆರ್ ಸಲಹೆ ನೀಡಿದೆ. ಇದರಿಂದ ಅಗತ್ಯದ ಕೆಲಸಗಳಿಗಾಗಿ ರಾಜ್ಯದೊಳಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
ಈ ಮಧ್ಯೆ, ಲಾಕ್‌ಡೌನ್ ಜಾರಿಗೊಳಿಸಿದ ಕೆಲವು ರಾಜ್ಯಗಳು ಅಂತರ್‌ರಾಜ್ಯ ಪ್ರಯಾಣಕ್ಕೆ ಇಪಾಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿರುವುದನ್ನು
ಮುಂದುವರಿಸಿವೆ. ಆದರೆ ಸೋಂಕಿನ ಲಕ್ಷಣ ವಿರುವವರು ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸುವ ಅಗತ್ಯವಿದೆ ಎಂದು ಸೂಚಿಸಲಾಗಿದೆ.
ಈ ಹಿಂದೆ ಆರ್‌ಎಟಿ ಅಥವಾ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪೊಸಿಟಿವ್ ವರದಿ ಬಂದವರು ಮತ್ತೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ.
ಅಲ್ಲದೆ ಆರ್‌ಎಟಿ ವಿಧಾನ ಬಳಸಿ ಪರೀಕ್ಷೆಯನ್ನು ಹೆಚ್ಚಿಸುವಂತೆ ಮತ್ತು ಎಲ್ಲಾ ಸರಕಾರಿ ಮತ್ತು ಖಾಸಗಿ ಆರೋಗ್ಯಸಂಸ್ಥೆಗಳಲ್ಲಿ ಈ ವ್ಯವಸ್ಥೆ ಮಾಡುವಂತೆ
ಐಸಿಎಂಆರ್ ಸಲಹೆ ನೀಡಿದೆ.
ಕೊರೋನ ಸೋಂಕಿನಿಂದ ಚೇತರಿಸಿಕೊಂಡವರು ಆಸ್ಪತ್ರೆಯಿಂದ ಬಿಡುಗಡೆ ಆಗುವ ಸಂದರ್ಭ ಮತ್ತೆ ಪರೀಕ್ಷೆಗೆ ಒಳಪಡುವ ಅಗತ್ಯವಿಲ್ಲ ಎಂದು ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.