ನೆಹರೂ-ಗಾಂಧಿ ಕುಟುಂಬದಿಂದಾಗಿ ಭಾರತವು ಇಂದು ಉಳಿದುಕೊಂಡಿದೆ: ಶಿವಸೇನೆ
"ನಮ್ಮ ಪರಿಸ್ಥಿತಿ ನೋಡಿ ನೆರೆಹೊರೆಯ ಬಡ ರಾಷ್ಟ್ರಗಳು ಸಹಾಯ ಮಾಡುತ್ತಿವೆ"
ಮುಂಬೈ: ಕೋವಿಡ್-19 ಅನ್ನು ನಿಭಾಯಿಸಲು ನೆರೆಹೊರೆಯ ಸಣ್ಣಪುಟ್ಟ ದೇಶಗಳು ಭಾರತಕ್ಕೆ ಸಹಾಯ ಮಾಡುತ್ತಿದ್ದರೆ, ಬಹುಕೋಟಿ ರೂ. ವೆಚ್ಚದ ಸೆಂಟ್ರಲ್ ವಿಸ್ಟಾ ಯೋಜನೆಯ ಕೆಲಸವನ್ನು ನಿಲ್ಲಿಸಲೂ ಮೋದಿ ಸರಕಾರ ಸಿದ್ಧವಾಗಿಲ್ಲ. ನೆಹರೂ-ಗಾಂಧಿ ಕುಟುಂಬದಿಂದಾಗಿ ಭಾರತವು ಇಂದು ಉಳಿದುಕೊಂಡಿದೆ ಎಂದು ಶಿವಸೇನೆ ಶನಿವಾರ ಕಿಡಿಕಾರಿದೆ.
ಪಂಡಿತ್ ನೆಹರೂ, ಇಂದಿರಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಸೇರಿದಂತೆ ಹಿಂದಿನ ಪ್ರಧಾನ ಮಂತ್ರಿಗಳು ಕಳೆದ 70 ವರ್ಷಗಳಲ್ಲಿ ರೂಪಿಸಿರುವ ವ್ಯವಸ್ಥೆಯು ಇಂದು ಎದುರಿಸುತ್ತಿರುವ ಕಠಿಣ ಕಾಲದಲ್ಲಿ ದೇಶವನ್ನು ಬದುಕಲು ಸಹಾಯ ಮಾಡಿದೆ ಎಂದು ಪಕ್ಷ ಹೇಳಿದೆ.
"ದೇಶದಲ್ಲಿ ಕೊರೋನವೈರಸ್ ಹರಡುವ ವೇಗದಿಂದಾಗಿ ಭಾರತದಿಂದ ಜಗತ್ತಿಗೆ ಅಪಾಯವಿದೆ ಎಂದು ಯುನಿಸೆಫ್ ಆತಂಕ ವ್ಯಕ್ತಪಡಿಸಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಗರಿಷ್ಠ ಸಂಖ್ಯೆಯ ದೇಶಗಳು ಭಾರತಕ್ಕೆ ಸಹಾಯ ಮಾಡಬೇಕೆಂದು ಮನವಿ ಮಾಡಿದೆ. ಬಾಂಗ್ಲಾದೇಶ 10,000 ರೆಮ್‌ಡೆಸಿವಿರ್ ಬಾಟಲುಗಳನ್ನು ಕಳುಹಿಸಿದರೆ, ಭೂತಾನ್ ವೈದ್ಯಕೀಯ ಆಮ್ಲಜನಕವನ್ನು ಕಳುಹಿಸಿದೆ. ನೇಪಾಳ, ಮ್ಯಾನ್ಮಾರ್ ಹಾಗೂ ಶ್ರೀಲಂಕಾ ಕೂಡ 'ಆತ್ಮನಿರ್ಭರ್' ಭಾರತಕ್ಕೆ ಸಹಾಯವನ್ನು ನೀಡಿವೆ "ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ತಿಳಿಸಿದೆ.
"ಸ್ಪಷ್ಟವಾಗಿ ಹೇಳುವುದಾದರೆ, ನೆಹರೂ-ಗಾಂಧಿ ರಚಿಸಿದ ವ್ಯವಸ್ಥೆಯಲ್ಲಿ ಭಾರತ ಉಳಿದುಕೊಂಡಿದೆ. ಅನೇಕ ಬಡ ದೇಶಗಳು ಭಾರತಕ್ಕೆ ಸಹಾಯವನ್ನು ನೀಡುತ್ತಿವೆ. ಈ ಹಿಂದೆ ಪಾಕಿಸ್ತಾನ, ರುವಾಂಡಾ ಮತ್ತು ಕಾಂಗೋ ಮುಂತಾದ ದೇಶಗಳು ಇತರರಿಂದ ಸಹಾಯ ಪಡೆಯುತ್ತಿದ್ದವು. ಆದರೆ ಇಂದಿನ ಆಡಳಿತಗಾರರ ತಪ್ಪು ನೀತಿಗಳಿಂದಾಗಿ ಭಾರತವು ಈಗ ಈ ಪರಿಸ್ಥಿತಿಯನ್ನು ಎದುರಿಸುತ್ತಿದೆ "ಎಂದು ಅದು ಹೇಳಿದೆ.
ಆದರೆ ಬಡ ದೇಶಗಳು ಭಾರತಕ್ಕೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದರೆ, 20,000 ಕೋಟಿ ರೂ.ಗಳ ವೆಚ್ಚದ ಸೆಂಟ್ರಲ್ ವಿಸ್ಟಾದ ಮಹತ್ವಾಕಾಂಕ್ಷೆಯ ಯೋಜನೆಯನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಸಿದ್ಧರಿಲ್ಲ ಎಂದು ಸೇನೆ ಕಿಡಿಕಾರಿದೆ.