ಕೋವಿಡ್ ಹರಡುವಿಕೆ ನಿಲ್ಲಲು ಗೋಮೂತ್ರ ಕುಡಿಯಿರಿ: ಉತ್ತರಪ್ರದೇಶ ಬಿಜೆಪಿ ಶಾಸಕನ ಸಲಹೆ
ಕ್ಯಾಮರಾ ಮುಂದೆ ಗೋಮೂತ್ರ ಕುಡಿದು ಡೆಮೋ ತೋರಿಸಿದ ಸುರೇಂದ್ರ ಸಿಂಗ್

ಲಕ್ನೋ: ದೇಶದಾದ್ಯಂತ ವ್ಯಾಪಕವಾಗಿ ಕೋವಿಡ್-19 ಹರಡುತ್ತಿದ್ದು, ಈ ಹರಡುವಿಎಯನ್ನು ತಡೆಗಟ್ಟುವ ಸಲುವಾಗಿ ಉತ್ತರಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ನೂತನ ಉಪಾಯವೊಂದನ್ನು ತಿಳಿಸಿದ್ದಾರೆ. ದೇಶದಾದ್ಯಂತ ಜನರು ಗೋಮೂತ್ರ ಕುಡಿಯುವುದರಿಂದ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಬಹುದು ಎಂದ ಅವರು ಸ್ವತಃ ತಾವೇ ಕ್ಯಾಮರಾ ಮುಂದೆ ಹಸುವಿನ ಮೂತ್ರ ಕುಡಿದು ಜನರಿಗೆ ಕರೆ ನೀಡಿದ್ದಾರೆ.
ಗೋಮೂತ್ರವನ್ನು ಹೇಗೆ ಸೇವಿಸಬೇಕು ಎಂಬ ವಿಧಾನಗಳ ಕುರಿತಾದಂತೆ ಸುರೇಂದ್ರ ಸಿಂಗ್ ವೀಡಿಯೋ ಮೂಲಕ ತಿಳಿಸಿದ್ದಾರೆ. ಜನರಿಗೆ ಗೋಮೂತ್ರ ಹೇಗೆ ಸೇವಿಸಬೇಕು ಎಂದು ತಿಳಿಸುವುದರೊಂದಿಗೆ ತಾವೂ ಗೋಮೂತ್ರ ಸೇವಿಸಿದ್ದಾರೆ. 18 ಗಂಟೆಗಳ ಕಾಲ ತಾನು ಜನಸೇವೆ ಮಾಡುತ್ತಿದ್ದು, ಇದಕ್ಕೆ ಗೋಮೂತ್ರ ಸೇವನೆಯಿಂದ ದೊರಕಿದ ಆರೋಗ್ಯವೇ ಕಾರಣ ಎಂದು ಅವರು ಹೇಳಿದ್ದಾರೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಮುಚ್ಚಳದಷ್ಟು ಗೋಮೂತ್ರವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಸೇವಿಸಬೇಕು ಎಂದ ಅವರು, ತಾನು ವಿಜ್ಞಾನವನ್ನು ನಂಬದಿದ್ದರೂ ಗೋಮೂತ್ರವನ್ನು ನಂಬುತ್ತೇನೆ. ಒಂದು ಲೋಟ ನೀರಿಗೆ ಗೋಮೂತ್ರ ಬೆರೆಸಿ ಕುಡಿದ ಬಳಿಕ ಅರ್ಧ ಗಂಟೆ ಏನನ್ನೂ ಸೇವಿಸಬಾರದು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ. ಸದ್ಯ ಅವರ ವೀಡಿಯೋ ಸಾಮಾಜಿಕ ತಾಣದಾದ್ಯಂತ ನಗೆಪಾಟಲಿಗೀಡಾಗಿದೆ.