ವಿಧಾನಸಭೆ ಚುನಾವಣೆಗಳನ್ನು ಮುಂದೂಡಲು ಚುನಾವಣಾ ಆಯೋಗ ನಿರ್ಧರಿಸಿತ್ತು, ಪ್ರತಿಷ್ಠೆಯ ಕಾರಣಕ್ಕೆ ಹಿಂದೆ ಸರಿದಿತ್ತು:ವರದಿ
ಹೊಸದಿಲ್ಲಿ, ಮೇ 8: ಎಪ್ರಿಲ್ನಲ್ಲಿ ಭಾರತದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾದುದರಿಂದ ಐದು ರಾಜ್ಯಗಳ ವಿಧಾನ ಸಭೆ ಚುನಾವಣೆಯ ಕೆಲವು ಹಂತಗಳ ಮತದಾನವನ್ನು ಮುಂದೂಡಲು ಚುನಾವಣಾ ಆಯೋಗ ಪರಿಗಣಿಸಿತ್ತು. ಆದರೆ, ಈ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗಿರುವುದರಿಂದ ಹಾಗೂ ಇದು ತನ್ನ ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡುತ್ತದೆ ಎಂಬ ಆತಂಕದಿಂದ ಚುನಾವಣಾ ಆಯೋಗ ಅಂತಿಮವಾಗಿ ಮತದಾನ ನಡೆಸಲು ನಿರ್ಧರಿಸಿತು ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
‘‘ಚುನಾವಣಾ ಆಯೋಗ ಒಂದು ಪಕ್ಷದ ಪರವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಆರೋಪಕ್ಕೆ ಒಳಗಾಗುವ ಹಾಗೂ ಅದು ಸಾಮೂಹಿಕ ವಿರೋಧ, ಅಸಮಾಧಾನಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಚುನಾವಣೆ ನಿಲ್ಲಿಸುವಂತಹ ನಿರ್ಧಾರವನ್ನು ಚುನಾವಣಾ ಆಯೋಗ ತೆಗೆದುಕೊಳ್ಳಲಿಲ್ಲ’’ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಕೊರೋನ ಸಾಂಕ್ರಾಮಿಕ ರೋಗದ ಹಾವಳಿ ನಡುವೆ ಚುನಾವಣೆಗಳನ್ನು ನಡೆಸಿದ ಕುರಿತ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಾಗ ಸಲ್ಲಿಸಲು ಬಯಸಿದ್ದ ಅಫಿಡವಿಟ್ನಲ್ಲಿ ರಾಜೀವ್ ಕುಮಾರ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ಆದರೆ, ಈ ಅಫಿಡವಿಟ್ ಇದುವರೆಗೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿಲ್ಲ. ಒಂದೇ ಪ್ರಕರಣಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ಎರಡು ಪ್ರತ್ಯೇಕ ಅಫಿಡವಿಟ್ ಸಲ್ಲಿಕೆಗೆ ಯಾವುದೇ ಆದ್ಯತೆ ಇಲ್ಲ ಎಂದು ಹೇಳುವ ಮೂಲಕ ಚುನಾವಣಾ ಆಯೋಗ ರಾಜೀವ್ ಕುಮಾರ್ ಅವರು ಅಫಿಡವಿಟ್ ಸಲ್ಲಿಸುವುದನ್ನು ತಡೆಯಿತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ದಿ ಪ್ರಿಂಟ್’ಗೆ ತಿಳಿಸಿದ್ದಾರೆ.
ಈ ವಿಷಯದ ಕುರಿತು ನಮ್ಮ ಹಿರಿಯ ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಲಾಯಿತು. ಅನಂತರ ರಾಜೀವ್ ಕುಮಾರ್ ಅವರ ಮನವಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ. ದೇಶಾದ್ಯಂತ ಹರಡುತ್ತಿರುವ ಕೋವಿಡ್ನ ಎರಡನೇ ಅಲೆಗೆ ಚುನಾವಣಾ ಆಯೋಗ ಭಾಗಶಃ ಹೊಣೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಎಪ್ರಿಲ್ 26ರಂದು ಚುನಾವಣಾ ಆಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.