ಕೋವಿಡ್ ರೋಗಿಗಳ ಚಿಕಿತ್ಸೆಗೆ ಸ್ಟಿರಾಯ್ಡ್ ಬಳಕೆ: ಕಪ್ಪು ಶಿಲೀಂಧ್ರ ಸೋಂಕು ಹೆಚ್ಚುತ್ತಿರುವ ಬಗ್ಗೆ ವೈದ್ಯರ ಆತಂಕ

ಹೊಸದಿಲ್ಲಿ, ಮೇ 8: ಕೋವಿಡ್ ಸೋಂಕಿತರಿಗೆ ಚಿಕಿತ್ಸೆಯಲ್ಲಿ ನಿರಂತರ ಹಾಗೂ ಅತ್ಯಧಿಕ ಡೋಸ್ ಸ್ಟಿರಾಯ್ಡ್ ಬಳಸುತ್ತಿರುವುದರಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಮಾರಣಾಂತಿಕ ಕಪ್ಪು ಶಿಲೀಂದ್ರದ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕೋವಿಡ್ನಿಂದ ಸಂಭವಿಸುವ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಸ್ಟಿರಾಯ್ಡ್ಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ, ಇದನ್ನು ದೀರ್ಘ ಕಾಲ ಹಾಗೂ ಅತ್ಯಧಿಕ ಪ್ರಮಾಣದಲ್ಲಿ ಬಳಸುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ನಡುವೆ ಶುಕ್ರವಾರ ಕೋವಿಡ್ ಕುರಿತ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರಕಾರ, ಇಂತಹ ಶಿಲೀಂಧ್ರ ಸೋಂಕು ಸಂಭವಿಸುವುದು ಸ್ವಾಭಾವಿಕ. ಕಪ್ಪು ಶಿಲೀಂದ್ರ ಹಾಗೂ ಕೋವಿಡ್ ನಡುವೆ ನಂಟಿರುವುದ ವಿಶೇಷವೇನಲ್ಲ ಎಂದಿತ್ತು.
‘‘ಕಪ್ಪು ಶಿಲೀಂಧ್ರ ಆರ್ದ್ರ ಮೇಲ್ಮೈಯಲ್ಲಿ ಸಂತಾನೋತ್ಪತ್ತಿ ಮಾಡುವ ಶಿಲೀಂಧ್ರ. ಕೋವಿಡ್-19 ರೋಗಿಗಳಲ್ಲಿ ಈ ಶಿಲೀಂಧ್ರ ಸೋಂಕು ಕಂಡು ಬಂದಿರುವುದು ವರದಿಯಾಗಿದೆ. ಆದರೆ, ಇದು ತೀವ್ರವಾಗಿ ಹರಡಲಾರದು ಎಂದು ನಾನು ಭರವಸೆ ನೀಡುತ್ತೇನೆ. ಅಲ್ಲದೆ, ನಮ್ಮ ಮಟ್ಟದಲ್ಲಿ ಈ ಪ್ರಕರಣಗಳ ಬಗ್ಗೆ ನಿಗಾ ವಹಿಸುತ್ತೇವೆ’’ ಎಂದು ನೀತಿ ಆಯೋಗ (ಆರೋಗ್ಯ)ದ ಸದಸ್ಯ ವಿ.ಕೆ. ಪೌಲ್ ಹೇಳಿದ್ದಾರೆ.
‘‘ಏಮ್ಸ್ನಲ್ಲಿ 2002-2014ರ ವರೆಗಿನ ಸೇವೆಯಲ್ಲಿ ನನಗೆ ವರ್ಷಕ್ಕೆ ಇಂತಹ ಕೇವಲ ಎರಡರಿಂದ ಮೂರು ಪ್ರಕರಣಗಳು ಬರುತ್ತಿತ್ತು. ಆದರೆ, ಇಂದು ನಾನು ಪ್ರತಿ ತಿಂಗಳಿಗೆ ಇಂತಹ 3ರಿಂದ 4 ಪ್ರಕರಣಗಳ ತಪಾಸಣೆ ನಡೆಸುತ್ತಿದ್ದೇನೆ’’ ಎಂದು ಗುರುಗ್ರಾದ ನಾರಾಯಣ ಆಸ್ಪತ್ರೆಯ ಕಣ್ಣಿನ ವಿಭಾಗದ ಮುಖ್ಯಸ್ಥ ಡಾ. ದಿಗ್ವಿಜಯ ಸಿಂಗ್ ಹೇಳಿದ್ದಾರೆ.
‘‘ಕೋವಿಡ್ ಸಾವಿನ ಸಂಖ್ಯೆಯನ್ನು ಇಳಿಕೆ ಮಾಡುವಲ್ಲಿ ಸ್ಟಿರಾಯ್ಡಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ, ಕೋವಿಡ್ ಚಿಕಿತ್ಸೆಯ ಸಂದರ್ಭ ಸ್ಟಿರಾಯ್ಡ್ ಗಳನ್ನು ತೆಗೆದುಕೊಂಡ ರೋಗಿಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕು, ಗ್ಲುಕೋಮಾ, ಕ್ಯಾಟ್ರಾಕ್ಟ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. ಇವರಲ್ಲಿ ಹೆಚ್ಚಿನ ರೋಗಿಗಳಿಗೆ ಸಕ್ಕರೆ ಕಾಯಿಲೆಯ ಹಿನ್ನೆಲೆ ಇದೆ’’ ಎಂದು ಸಿಂಗ್ ಹೇಳಿದ್ದಾರೆ.
ಇದೇ ರೀತಿಯ ಆತಂಕವನ್ನು ಇತರ ಕೆಲವು ವೈದ್ಯಕೀಯ ತಜ್ಞರು ಕೂಡ ವ್ಯಕ್ತಪಡಿಸಿದ್ದ್ಜಾರೆ. ಮುಂಬೈಯ ಸೆವೆನ್ ಸ್ಟಾರ್ ಆಸ್ಪತ್ರೆಯ ನಿರ್ದೇಶಕ ಹಾಗೂ ತಲೆ ಹಾಗೂ ಕುತ್ತಿಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ,. ಶೈಲೇಶ್ ಕೊಥಾಲ್ಕರ್, ‘‘ನಾನು ಕಳೆದ ಎರಡು ದಶಕಗಳಲ್ಲಿ ಕಪ್ಪು ಶಿಲೀಂಧ್ರದ ಸೋಂಕಿಗೆ ಒಳಗಾದ ಕೇವಲ 12 ರೋಗಿಗಳಿಗೆ ಮಾತ್ರ ಶಸ್ತ್ರಚಿಕಿತ್ಸೆ ನಡೆಸಿದ್ದೇನೆ. ಆದರೆ, ಕಳೆದ ಎರಡು ತಿಂಗಳಲ್ಲಿ ಪ್ರತಿ ದಿನ 4 ಕಪ್ಪು ಶಿಲೀಂದ್ರದದ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದೇನೆ. ಇದು ಈ ಪ್ರಕರಣಗಳು ಹೆಚ್ಚಾಗಿರುವುದನ್ನು ತೋರಿಸುತ್ತದೆ’’ ಎಂದು ಹೇಳಿದ್ದಾರೆ.
ಕಪ್ಪು ಶಿಲೀಂಧ್ರ ಸೋಂಕಿಗೆ 8 ಮಂದಿ ಬಲಿ
ಮಹಾರಾಷ್ಟ್ರದಲ್ಲಿ ಕಪ್ಪು ಶಿಲೀಂಧ್ರದ ಸೋಂಕಿನಿಂದ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆ (ಡಿಎಂಇಆರ್) ನಿರ್ದೇಶನಾಲಯದ ಮುಖ್ಯಸ್ಥ ಡಾ. ತಾತ್ಯರಾವ್ ಲಹಾನೆ ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 200 ಮಂದಿ ರೋಗಿಗಳಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್ ಸೋಂಕಿನಿಂದ ಗುಣಮುಖರಾದವರು ದುರ್ಬಲ ರೋಗ ನಿರೋಧಕ ವ್ಯವಸ್ಥೆಯಿಂದಾಗಿ ಮಾರಣಾಂತಿಕ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದೀರ್ಘಕಾಲೀನ ಆರೋಗ್ಯ ಸಮಸ್ಯೆ ಹಾಗೂ ಅನಾರೋಗ್ಯದಿಂದ ರೋಗ ನಿರೋಧಕ ಶಕ್ತಿ ದುರ್ಬಲವಾದ ಜನರಲ್ಲಿ ಆಗಾಗ ಕಾಣಿಸಿಕೊಳ್ಳುವ ಮಾರಣಾಂತಿಕ ಸೋಂಕು ಇದಾಗಿದೆ ಎಂದು ಅವರು ಹೇಳಿದ್ದಾರೆ.