ಕೊನೆಗೂ ಹಿಂದೂ ಮಹಾಸಾಗರದಲ್ಲಿ ಪತನಗೊಂಡ ಚೀನಾದ ರಾಕೆಟ್ ಅವಶೇಷಗಳು

photo: AP | PTI
ಬೀಜಿಂಗ್, ಮೇ 9: ಚೀನಾದ ರಾಕೆಟೊಂದರ ಬೃಹತ್ ಭಾಗವೊಂದು ರವಿವಾರ ಭೂಮಿಯ ವಾತಾವರಣವನ್ನು ಪ್ರವೇಶಿಸಿದೆ ಹಾಗೂ ಹಿಂದೂ ಮಹಾಸಾಗರದ ಆಕಾಶದಲ್ಲಿ ಛಿದ್ರವಾಗಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. 18 ಟನ್ ತೂಕದ ವಸ್ತುವು ಎಲ್ಲಿ ಭೂಮಿಯನ್ನು ಅಪ್ಪಳಿಸುತ್ತದೆ ಎಂಬ ಊಹಾಪೋಹಗಳ ನಡುವೆ ಸಮಸ್ಯೆಯು ಸುಲಭವಾಗಿ ಇತ್ಯರ್ಥಗೊಂಡಿದೆ.
ನಿಯಂತ್ರಣವಿಲ್ಲದೆ ಭೂಮಿಯತ್ತ ಧಾವಿಸುತ್ತಿರುವ ಲಾಂಗ್ ಮಾರ್ಚ್ 5ಬಿ ರಾಕೆಟ್ನಿಂದ ಯಾವುದೇ ಅಪಾಯವಿಲ್ಲ ಎಂಬುದಾಗಿ ಚೀನಾದ ಅಧಿಕಾರಿಗಳು ಹೇಳಿದ್ದರು. ಈ ರಾಕೆಟ್ ಎಪ್ರಿಲ್ 29 ರಂದು ಚೀನಾದ ಪ್ರಸ್ತಾಪಿತ ಬಾಹ್ಯಾಕಾಶ ನಿಲ್ದಾಣದ ಮೊದಲ ಮೋಡ್ಯೂಲನ್ನು ಹೊತ್ತುಕೊಂಡು ಬಾಹ್ಯಾಕಾಶಕ್ಕೆ ನೆಗೆದಿತ್ತು. ಮೋಡ್ಯೂಲನ್ನು ಭೂಮಿಯ ಕಕ್ಷೆಗೆ ಸೇರಿಸಿದ ಬಳಿಕ, ರಾಕೆಟ್ ಕೂಡ ಕಕ್ಷೆಗೆ ಸೇರಿಕೊಂಡಿತ್ತು.
ಈ ರಾಕೆಟ್ ನಿಯಂತ್ರಿತ ವಾಪಸಾತಿ ವ್ಯವಸ್ಥೆಯನ್ನು ಹೊಂದಿಲ್ಲವಾದುದರಿಂದ, ಕಕ್ಷೆಯಿಂದ ಹೊರಬಿದ್ದು ಭೂಮಿಯ ಯಾವುದೇ ಭಾಗದಲ್ಲಾದರೂ ಅಪ್ಪಳಿಸುವ ಅಪಾಯವನ್ನು ಒಡ್ಡಿತ್ತು.
ಭಾರತೀಯ ಕಾಲಮಾನ ರವಿವಾರ ಬೆಳಗ್ಗೆ 7:54ಕ್ಕೆ ರಾಕೆಟ್ನ ಕೊನೆಯ ಹಂತದ ಅವಶೇಷವು ಭೂಮಿಯ ವಾತಾವರಣವನ್ನು ಪ್ರವೇಶಿಸಿತು ಹಾಗೂ ಮಾಲ್ದೀವ್ಸ್ ಸಮೀಪದ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿತು ಎಂದು ಚೀನಾದ ಬಾಹ್ಯಾಕಾಶ ಇಂಜಿನಿಯರಿಂಗ್ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.