ಲಸಿಕೆಗಾಗಿ ಮುಂದುವರಿದ ಬೇಡಿಕೆ, ಪರದಾಟ: ದ.ಕ. ಜಿಲ್ಲೆಗೆ 1000 ಕೋವ್ಯಾಕ್ಸಿನ್ ಪೂರೈಕೆ
ಎನ್‌ಐಸಿಯಿಂದ ಸಂದೇಶ ಬಂದವರಿಗೆ ಸೆಕೆಂಡ್ ಡೋಸ್

ಮಂಗಳೂರು, ಮೇ 9: ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿರುವಂತೆಯೇ ಈಗಾಗಲೇ ಲಸಿಕೆ ಪಡೆದು ಎರಡನೆ ಡೋಸ್ ಪಡೆಯಲು ಅವಧಿ ಮೀರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈಗಾಗಲೇ ಕೋವ್ಯಾಕ್ಸಿನ್ ಜಿಲ್ಲೆಗೆ ಪೂರೈಕೆಯಾಗದೆ ಸುಮಾರು ಎರಡು ವಾರವಾಗಿದ್ದು, ನಿನ್ನೆ ಸುಮಾರು 1000 ಡೋಸ್ ಜಿಲ್ಲೆಗೆ ಬಂದಿದೆ. ಕೋವ್ಯಾಕ್ಸಿನ್ ಪ್ರಥಮ ಡೋಸ್ ಪಡೆದು ಸುಮಾರು ಏಳೆಂಟು ವಾರಗಳಿಂದ ಕಾಯುತ್ತಿರುವವರ ಸಂಖ್ಯೆಯೂ ಅಧಿಕವಾಗಿದ್ದು, ಅವರಿಗೆ ಪ್ರಥಮ ಹಂತದಲ್ಲಿ ಆದ್ಯತೆಯ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ನಿರ್ಧರಿಸಿದೆ.
‘‘ದ.ಕ. ಜಿಲ್ಲೆಗೆ 1000 ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದ್ದು, ವೆನ್‌ಲಾಕ್‌ಗೆ 360 ಕೋವ್ಯಾಕ್ಸಿನ್ ಡೋಸ್ ಹಂಚಿಕೆ ಮಾಡಲಾಗಿದೆ. ಉಳಿದಂತೆ ಜಿಲ್ಲೆಯ ಇತರ ತಾಲೂಕು ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಲಾಗುವುದು. ಈಗಾಗಲೇ ಖಾಸಗಿ ಹಾಗೂ ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಪ್ರಥಮ ಡೋಸ್ ಪಟ್ಟಿಯನ್ನು ಪಡೆಯಲಾಗಿದೆ. ಲಸಿಕೆ ಪಡೆದು ಈಗಾಗಲೇ 42 ದಿನಗಳಾಗಿರುವವರಿಗೆ ಆದ್ಯತೆಯ ನೆಲೆಯಲ್ಲಿ ಈಗ ಪೂರೈಕೆಯಾಗಿರುವ ಲಸಿಕೆಯನ್ನು ನೀಡಲಾಗುವುದು. ಇದಕ್ಕಾಗಿ ನ್ಯಾಷನಲ್ ಇನ್‌ಫೋರ್ಮೇಶನ್ ಸೆಂಟರ್ (ಎನ್‌ಐಸಿ)ನಿಂದ ಲಸಿಕೆ ಪಡೆಯುವವರಿಗೆ ಮೊಬೈಲ್ ಮೂಲಕ ಸಂದೇಶವನ್ನು ರವಾನಿಸಲಾಗುತ್ತದೆ. ಸಂದೇಶ ದೊರಕಿದವರಿಗೆ ಮಾತ್ರವೇ ಪ್ರಸ್ತುತ ಸೆಕೆಂಡ್ ಡೋಸ್ ಕೋವ್ಯಾಕ್ಸಿನ್ ನೀಡಲಾಗುವುದು’’ ಎಂದು ದ.ಕ. ಜಿಲ್ಲಾ ಕೋವಿಡ್ ಲಸೀಕರಣ ನೋಡಲ್ ಅಧಿಕಾರಿ ಡಾ. ರಾಜೇಶ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.
‘‘ಕೋವಿಶೀಲ್ಡ್ ಲಸಿಕೆಯೂ ಬೆಂಗಳೂರಿಗೆ ಪೂರೈಕೆಯಾಗಿದ್ದು, ಜಿಲ್ಲೆಗೆ ತರಲು ನಮ್ಮ ವಾಹನ ಇಂದು ತೆರಳಲಿದೆ. ಅಲ್ಲಿಂದ ಮಂಗಳೂರು ತಲುಪಿದ ಬಳಿಕ ಅದನ್ನು ಆಯಾ ಲಸಿಕಾ ಕೇಂದ್ರಗಳಿಗೆ ಪೂರೈಸಿ ಆದ್ಯತೆ ನೆಲೆಯಲ್ಲಿ ದ್ವಿತೀಯ ಡೋಸ್‌ನವರಿಗೆ ಪ್ರಥಮವಾಗಿ ನೀಡಲು ಕ್ರಮ ವಹಿಸಲಾಗುವುದು. ಜಿಲ್ಲೆಗೆ ಈವರೆಗೆ 40,200 ಡೋಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಕೆಯಾಗಿತ್ತು. ಅದರಲ್ಲಿ ಶೇ. 2ರಿಂದ 3ರಷ್ಟು ಪೋಲಾಗಿ, 30,000 ಮಂದಿ ಪ್ರಥಮ ಡೋಸ್ ಪಡೆದವರಿದ್ದಾರೆ. ಕೆಲವರು ದ್ವಿತೀಯ ಡೋಸ್ ಕೂಡಾ ಈಗಾಗಲೇ ಪಡೆದುಕೊಂಡಿದ್ದಾರೆ’’ ಎಂದು ಡಾ. ರಾಜೇಶ್ ತಿಳಿಸಿದ್ದಾರೆ.
ಯಾವಾಗ ಬರುತ್ತಂತೆ ಕೋವ್ಯಾಕ್ಸಿನ್ ?
ಇಂದು ಬೆಳಗ್ಗೆ ಪತ್ರಿಕಾ ಪ್ರತಿನಿಧಿಗೆ ಕರೆ ಮಾಡಿದ ಸುಧಾ ನಾಯಕ್ ಎಂಬವರು ‘‘ಕೋವ್ಯಾಕ್ಸಿನ್ ಯಾವಾಗ ಬರುತ್ತೆ. ನಾನು ಪಡೆದು 41 ದಿನಗಳಾಗಿವೆ. ನಾನು ಸೆಕೆಂಡ್ ಡೋಸ್‌ಗಾಗಿ ಹಲವಾರು ದಿನಗಳಿಂದ ಆರೋಗ್ಯ ಇಲಾಖೆ ಕರೆ ಮಾಡಿ ವಿಚಾರಿಸುತ್ತಿದ್ದೇನೆ. ಲಸಿಕೆ ಪಡೆಯದ ಕಾರಣ ನನ್ನ ವಿದೇಶ ಪ್ರಯಾಣವೂ ಮೊಟಕುಗೊಂಡಿದೆ. ಕೋವ್ಯಾಕ್ಸಿನ್ ಬಂದಲ್ಲಿ ಅದನ್ನು ಸೆಕೆಂಡ್ ಡೋಸ್‌ನವರಿಗೆ ನೀಡುವಾಗ ಮೊಬೈಲ್‌ಗೆ ಸಂದೇಶ ಬರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನನಗೆ ಇವತ್ತು ಬೆಳಗ್ಗಿನವರೆಗೂ ಸಂದೇಶ ಬಂದಿಲ್ಲ’’ ಎಂದು ಅಸಮಾಧಾನ ವ್ಯಕ್ತಪಪಡಿಸಿದರು.







