ಕೋವಿಡ್ ನಿಯಂತ್ರಣದಲ್ಲಿ ವಿಫಲ: ಪ್ರಧಾನಿ ಮೋದಿ ಜನಪ್ರಿಯತೆಯಲ್ಲಿ ತೀವ್ರ ಕುಸಿತ: ವರದಿ

ಹೊಸದಿಲ್ಲಿ: ದೇಶದಾದ್ಯಂತ ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕೆ ತರುವಲ್ಲಿ ಕೇಂದ್ರ ಸರಕಾರ ವಿಫಲವಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಲ್ಲಿ ತೀವ್ರ ಕುಸಿತ ಕಂಡಿದೆ ಎಂದು Financial Times Asia ವರದಿ ಮಾಡಿದೆ. ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಕೈಗೊಂಡಿರುವ ಜನಪ್ರಿಯತೆ ಸೂಚ್ಯಂಕದ ಆಧಾರದಲ್ಲಿ ಅದು ವರದಿ ಪ್ರಕಟಿಸಿದೆ.
ಮೇ 4ರಂದು ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆಯ ಸೂಚ್ಯಂಕವು 65% ಗೆ ಕುಸಿತ ಕಂಡಿದೆ. ಮಾರ್ಚ್ ಕೊನೆಯ ವಾರದಲ್ಲಿ ಅವರ ಜನಪ್ರಿಯತೆ ಸೂಚ್ಯಂಕವು 74% ಇತ್ತು ಎಂದು ವರದಿ ತಿಳಿಸಿದೆ. 2019ರಿಂದ ಈ ಏಜೆನ್ಸಿಯು ಜನಪ್ರಿಯತೆ ಸೂಚ್ಯಂಕ ಪ್ರಾರಂಭಿಸಿದ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ಮೋದಿಯ ಜನಪ್ರಿಯತೆಯು ಈ ಮಟ್ಟಕ್ಕೆ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.
ಇದರೊಂದಿಗೆ ಪ್ರಧಾನಿ ಮೋದಿಯೊಂದಿಗಿನ ಅಸಮ್ಮತಿ ರೇಟಿಂಗ್ ಕೂಡಾ ಹೆಚ್ಚಾಗಿದೆ. 20 ರಿಂದ 29%ವರೆಗೆ ತಲುಪಿದೆ ಎಂದು ವರದಿ ಬೆಟ್ಟು ಮಾಡಿದೆ. "ಜನರ ಗ್ರಹಿಕೆ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತಮವಾಗಿದ್ದರು. ಜನರಿಗೆ ಸಂದೇಶ ನೀಡುವಿಕೆಯಲ್ಲೂ ಅವರು ಮುಂದಿದ್ದರು. ಆದರೆ ಕೋವಿಡ್ ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಅದರಲ್ಲೂ ವಿಫಲರಾಗಿದ್ದಾರೆ" ಎಂದು ಸೌತ್ ಏಶ್ಯನ್ ಸ್ಟಡೀಸ್ ಸಿಂಗಾಪೂರ್ ನ ಹಿರಿಯ ಸಂಶೋಧನಾ ತಜ್ಞ ರೊನೋಜಾಯ್ ಸೇನ್ ಹೇಳಿಕೆ ನೀಡಿದ್ದಾರೆ.








