ಕೋವಿಡ್ ವಿರುದ್ಧ ಹೋರಾಟಕ್ಕೆ ಪ್ರಧಾನಿ ಮೋದಿಗೆ ಪತ್ರ ಬರೆದು ಸಲಹೆ ನೀಡಿದ ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಗೆ ರವಿವಾರ ಪತ್ರ ಬರೆದಿರುವ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಎರಡನೇ ಕೋವಿಡ್ ಅಲೆಯನ್ನು ಎದುರಿಸಲು ಆರು ಸಲಹೆಗಳನ್ನು ನೀಡಿದ್ದಾರೆ.
ಸಾಮಾನ್ಯ ಭಾರತೀಯರು ತಮ್ಮ ಪ್ರೀತಿಪಾತ್ರರ ಚಿಕಿತ್ಸೆ ಖಾತ್ರಿಪಡಿಸಲು ತಮ್ಮ ಭೂಮಿ, ಆಭರಣಗಳನ್ನು ಮಾರಾಟ ಮಾಡುವ, ಉಳಿತಾಯ ಹಣವನ್ನು ಖರ್ಚು ಮಾಡುವ ಅನಿವಾರ್ಯತೆ ಎದುರಾಗಿದೆ. ಸಾಮೂಹಿಕ ಮತ್ತು ಒಮ್ಮತದ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಪ್ರಧಾನಮಂತ್ರಿಯನ್ನು ಒತ್ತಾಯಿಸಿದರು. ನಾಗರಿಕ ಸಮಾಜ ಹಾಗೂ ನಾಗರಿಕ ಗುಂಪುಗಳು "ಅಸಾಧಾರಣ ರಾಷ್ಟ್ರೀಯ ಯುದ್ಧ" ದಲ್ಲಿ ಹೋರಾಡುತ್ತಿದ್ದಾರೆ . ಕೇಂದ್ರವು ತನ್ನ ಕರ್ತವ್ಯಗಳನ್ನು ತ್ಯಜಿಸಿದೆ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಖರ್ಗೆ ಪತ್ರದಲ್ಲಿ ಬರೆದಿದ್ದಾರೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಮಗ್ರ ನೀಲನಕ್ಷೆಯನ್ನು ಒಟ್ಟಾಗಿ ರೂಪಿಸಲು ಹಾಗೂ ಎಲ್ಲಾ ಭಾರತೀಯರಿಗೆ ಚುಚ್ಚುಮದ್ದು ನೀಡುವುದನ್ನು ಖಚಿತಪಡಿಸಿಕೊಳ್ಳಲು ಕೋವಿಡ್ ಲಸಿಕೆಗಳಿಗಾಗಿ ನಿಗದಿಪಡಿಸಿದ 35,000 ಕೋಟಿ ರೂ.ಗಳನ್ನು ಬಳಸಿಕೊಳ್ಳಲು ಸರ್ವಪಕ್ಷ ಸಭೆಯನ್ನು ಕರೆಯುವಂತೆ ಖರ್ಗೆ ಅವರು ತಮ್ಮ ಪತ್ರದಲ್ಲಿ ಕರೆ ನೀಡಿದರು.
ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು "ಕಡ್ಡಾಯ ಪರವಾನಗಿಯನ್ನು ಹತೋಟಿಗೆ ತರಲು", ನಿರ್ಣಾಯಕ ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆಗಳನ್ನು ಮನ್ನಾ ಮಾಡಲು ಅವರು ಹೇಳಿದರು. ಲಸಿಕೆಗಳು (ಐದು ಶೇಕಡಾ), ಪಿಪಿಇ ಕಿಟ್‌ಗಳು (ಐದು ಹಾಗೂ 12 ಶೇಕಡಾ ನಡುವೆ), ಆ್ಯಂಬುಲೆನ್ಸ್‌ಗಳು (ಶೇಕಡಾ 28) ಹಾಗೂ ಆಮ್ಲಜನಕ ಸಾಂದ್ರಕಗಳ (ಶೇ 12) ಮೇಲಿನ ತೆರಿಗೆ ಮನ್ನಾಕ್ಕೆ ಒತ್ತಾಯಿಸಿದ್ದಾರೆ.
ನಿರುದ್ಯೋಗಿ ವಲಸಿಗರಿಗೆ ಸಹಾಯ ಮಾಡಲು ವಿದೇಶಿ ಪರಿಹಾರ ಸಾಮಗ್ರಿಗಳ ವಿತರಣೆಯನ್ನು ತ್ವರಿತಗೊಳಿಸಲು ಹಾಗೂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕನಿಷ್ಠ ವೇತನ ಹಾಗೂ ಕೆಲಸದ ದಿನಗಳಲ್ಲಿ (100 ರಿಂದ 200 ರವರೆಗೆ) ಹೆಚ್ಚಳ ಮಾಡಬೇಕೆಂದು ಖರ್ಗೆ ಕೇಳಿಕೊಂಡರು.







