ಆಕ್ಸಿಜನ್ ರೀಫಿಲ್ಲಿಂಗ್ ಘಟಕಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಭೇಟಿ

ಮಂಗಳೂರು, ಮೇ 9: ನಗರ ಹೊರವಲಯದ ಬೈಕಂಪಾಡಿಯ ಮಲಬಾರ್, ಲಕ್ಷ್ಮಿ ಹಾಗೂ ಕಾರ್ನಾಡ್ ಆಕ್ಸಿಜನ್ ರೀಫಿಲ್ಲಿಂಗ್ ಘಟಕಗಳಿಲ್ಲಿ ಆಕ್ಸಿಜನ್ ಉತ್ಪಾದನೆ ಹಾಗೂ ಸಿಲೆಂಡರ್‌ಗಳಿಗೆ ರಿಫೀಲಿಂಗ್ ಮಾಡುವ ಪ್ರಕ್ರಿಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರವಿವಾರ ಭೇಟಿ ನೀಡಿ ಪರಿಶೀಲಿಸಿದರು.
ಆಕ್ಸಿಜನ್ ಫಿಲ್ಲಿಂಗ್ ಘಟಕಗಳಿಗೆ ಯಾವ ಯಾವ ಜಿಲ್ಲೆಯ ಆಕ್ಸಿಜನ್ ಉತ್ಪಾದನಾ ಘಟಕಗಳಿಂದ ಎಷ್ಟು ಪ್ರಮಾಣದ ಆಕ್ಸಿಜನ್ ವಾರದಲ್ಲಿ ಎಷ್ಟು ಬರುತ್ತದೆ ಹಾಗೂ ಸ್ಥಳೀಯವಾಗಿ ಆಕ್ಸಿಜನ್ ಉತ್ಪಾದಿಸುವ ಬಗ್ಗೆ ಅವುಗಳನ್ನು ರೀಫಿಲ್ಲಿಂಗ್ ಮಾಡಿ ಯಾವ ಯಾವ ತಾಲೂಕಿನ ಆಸ್ಪತ್ರೆಗಳಿಗೆ ಕಳಿಸಲಾಗುತ್ತಿದೆ ಎಂಬುದರ ಬಗ್ಗೆ ಸಚಿವರು ಮಾಹಿತಿ ಪಡೆದರು.
ಜಿಲ್ಲೆಯ 3 ಆಕ್ಸಿಜನ್ ಉತ್ಪಾದನಾ ಹಾಗೂ ರೀಫಿಲ್ಲಿಂಗ್ ಘಟಕಗಳಲ್ಲಿನ ಆಕ್ಸಿಜನನ್ನು ಆಸ್ಪತ್ರೆಗಳಲ್ಲಿನ ರೋಗಿಗಳ ಚಿಕಿತ್ಸೆಗೆ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಬೇಕು ಎಂದು ಸೂಚಿಸಿದ ಸಚಿವ ಕೋಟ ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಯಾಗದಂತೆ ಅವುಗಳ ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಅಗತ್ಯಕ್ಕನುಸಾರವಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಕೈಗಾರಿಕೆಗೆ ಬಳಸಲು ನೀಡುವ ಪ್ರಮಾಣ ಕಡಿತಗೊಳಿಸಿ ವೈದ್ಯಕೀಯ ಕ್ಷೇತ್ರಕ್ಕೆ ಆದ್ಯತೆಯ ಮೇಲೆ ಆಕ್ಸಿಜನ್ ಒದಗಿಸಬೇಕು. ಸ್ಥಳೀಯವಾಗಿ ಉತ್ಪಾದಿಸುತ್ತಿರುವ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಬೇಕು ಎಂದು ಆಕ್ಸಿಜನ್ ತಯಾರಕ ಘಟಕಗಳಿಗೆ ಸೂಚಿಸಿದರು.
ಡ್ಯೂರ ಸಿಲೆಂಡರ್‌ಗಳಲ್ಲಿ ಹೆಚ್ಚಿನ ಆಕ್ಸಿಜನ್ ಶೇಖರಣೆ ಮಾಡಬಹುದಾಗಿದೆ. ತಾಲೂಕು ಆಸ್ಪತ್ರೆಗಳ ವೆಂಟಿಲೇಟರ್‌ಗಳ ಬಳಕೆಗೆ ಅವುಗಳನ್ನು ನೀಡಬಹುದಾಗಿದ್ದು, ಎರಡು ದಿನ ಬಳಕೆಗೆ ಬರುತ್ತವೆ. ಅವುಗಳನ್ನು ವಿದೇಶದಿಂದ ತರಿಸಲು ಯೋಜನೆ ರೂಪಿಸಿದೆ. ಆಕ್ಸಿಜನ್ ಘಟಕಗಳ ಮೇಲುಸ್ತುವಾರಿಗೆ ಅಧಿಕಾರಿಗಳನ್ನು ದಿನದ 24 ಗಂಟೆಗೆ ಪಾಳಿಯ ಮೇಲೆ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಹೇಳಿದರು.
ಈ ಸಂದರ್ಭ ಶಾಸಕ ಭರತ್ ಶೆಟ್ಟಿ, ಜಿಪಂ ಸಿಇಒ ಡಾ. ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







