ಅಗತ್ಯ ವಸ್ತುಗಳ ಖರೀದಿಗೆ ವಾಹನಗಳ ಬಳಕೆ : ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿದ್ದೇನು?

ಮಂಗಳೂರು, ಮೇ 9: ಅಗತ್ಯ ವಸ್ತುಗಳನ್ನು ಅಂಗಡಿಗಳಿಂದ ತರಲು ಅನಿವಾರ್ಯ ಸಂದರ್ಭಗಳಲ್ಲಿ ವಾಹನಗಳನ್ನು ಬಳಕೆ ಮಾಡಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಅಗತ್ಯ ವಸ್ತುಗಳನ್ನು ಸಮೀಪದ ಅಂಗಡಿಗಳಿಂದ ನಡೆದುಕೊಂಡು ಹೋಗಿ ಖರೀದಿಸಿ. ಈ ಸಂದರ್ಭ ವಾಹನ ಬಳಕೆ ಮಾಡಿದರೆ ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಶನಿವಾರ ತಮ್ಮ ಹೇಳಿಕೆಯಲ್ಲಿ ಪೊಲೀಸ್ ಆಯುಕ್ತರು ತಿಳಿಸಿದ್ದರು.
ರವಿವಾರ ನೀಡಿದ ಹೇಳಿಕೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಾಧ್ಯವಾದಷ್ಟು ನಡೆದುಕೊಂಡೇ ಹೋಗಿ. ಅನಿವಾರ್ಯ ಸಂದರ್ಭ ಮಾತ್ರ ವಾಹನಗಳನ್ನು ಬಳಕೆ ಮಾಡಿ ಎಂದಿದ್ದಾರೆ.
ಲಾಕ್‌ಡೌನನ್ನು ಪರಿಣಾಮಕಾರಿಯಾಗಿ ಹೇಗೆ ಜಾರಿಗೊಳಿಸಬಹುದು ಎಂದು ರವಿವಾರ ಪೊಲೀಸ್ ಕಮಿಷನರ್ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ್ದರು. ಈ ಮಧ್ಯೆ ವಿಪಕ್ಷದ ನಾಯಕರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಅದರಂತೆ ರವಿವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಕಮಿಷನರ್ ಶಶಿಕುಮಾರ್ ವಾಹನ ಬಳಕೆ ಬಗ್ಗೆ ಯಾವುದೇ ಗೊಂದಲ ಬೇಡ. ಅನಿವಾರ್ಯ ಸಂದರ್ಭ ಮಾತ್ರ ಬಳಸಿಕೊಳ್ಳಿ ಎಂದಿದ್ದಾರೆ. ಅಲ್ಲದೆ ಆಹಾರ ಪಾರ್ಸಲ್ ತರಲು ವಾಹನ ಬಳಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.







