ಚಿಕ್ಕಮಗಳೂರು: ರವಿವಾರ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಸಾರ್ವಜನಿಕರು
ಹೊಸ ಕರ್ಫ್ಯೂ ಮಾರ್ಗಸೂಚಿ ಜಾರಿ ಹಿನ್ನೆಲೆ
ಚಿಕ್ಕಮಗಳೂರು, ಮೇ 9: ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೆಲ ಮಾರ್ಪಾಡುಗಳೊಂದಿಗೆ ಹೇರಿರುವ ಕರ್ಫ್ಯೂ ಸೋಮವಾರದಿಂದ ಜಿಲ್ಲಾದ್ಯಂತ ಜಾರಿಯಾಗುವ ಹಿನ್ನೆಲೆಯಲ್ಲಿ ರವಿವಾರ ಪೊಲೀಸರು ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಸೋಮವಾರದಿಂದ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲು ಜಿಲ್ಲಾದ್ಯಂತ ಚೆಕ್‍ಪೋಸ್ಟ್ ಸೇರಿದಂತೆ ಅನಗತ್ಯ ವಾಹನ ಸಂಚಾರ ಹಾಗೂ ಜನಸಂಚಾರಕ್ಕೆ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಕಾಫಿನಾಡಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್, ಹಾಸಿಗೆ ಸಮಸ್ಯೆ ಎದುರಾಗಿದೆ. ಈ ನಿಟ್ಟಿನಲ್ಲಿ ಜನರು ಅನಗತ್ಯವಾಗಿ ತಿರುಗಾಡುವುದಕ್ಕೆ ಪೊಲೀಸರು ಬ್ರೇಕ್ ಹಾಕುತ್ತಿದ್ದು ಸೋಮವಾರದಿಂದ ಕರ್ಫ್ಯೂ ನಿರ್ಬಂಧಗಳು ಮತ್ತಷ್ಟು ಬಿಗಿಗೊಳ್ಳಲಿವೆ.
ಸರಕಾರ ಅಗತ್ಯವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರವರೆಗೂ ಅವಕಾಶ ನೀಡಿದ್ದರೂ ಚಿಕ್ಕಮಗಳೂರು ನಗರದಲ್ಲಿ ರವಿವಾರ ಬೆಳಗ್ಗೆಯಿಂದ 12ರವರೆಗೆ ರಜಾದಿನದಂದೂ ವಾಹನಗಳ ಸಂಚಾರ ಹೆಚ್ಚಿತ್ತು. ಅಂಗಡಿ ಮುಂಗಟ್ಟುಗಳ ಮುಂದೇ ಜನರು ಅಗತ್ಯ ವಸ್ತುಗಳ ಖರೀದಿಗೆ ತುಂಬಿ ತುಳುಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೀನು, ಮಾಂಸ ಮಾರುಕಟ್ಟೆಯೂ ಜನಜಂಗುಳಿಯಿಂದ ತುಂಬಿತ್ತು. ಒಮ್ಮೆಲೆ ಜನರು ಖರೀದಿಗೆ ಮುಗಿಬಿದ್ದ ಪರಿಣಾಮ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪೊಲೀಸರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿ ಮಾಲಕರಿಗೆ ದಂಡ ವಿಧಿಸಿದರು.
ನಿಗಧಿತ ಸಮಯ ಮೀರುತ್ತಿದ್ದಂತೆ ಮೆಡಿಕಲ್ ಶಾಪ್, ಎಟಿಎಂ, ಪೆಟ್ರೋಲ್‍ಬಂಕ್, ಆಸ್ಪತ್ರೆ ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳ ಬಾಗಿಲುಗಳನ್ನು ಪೊಲೀಸರು
ಜಿಲ್ಲೆಯಲ್ಲಿ ಕೊರೋನ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣದ ಉದ್ದೇಶದಿಂದ ಸರಕಾರ ಕೆಲ ಮಾರ್ಪಾಡುಗಳೊಂದಿಗೆ ಸೋಮವಾರದಿಂದ ಹೊಸ ಕಫ್ರ್ಯೂ ಮಾರ್ಗಸೂಚಿ ಜಾರಿ ಮಾಡಿದೆ. ಇದರ ಪಾಲನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಕ್ರಮಗಳನ್ನು ಕೈಗೊಳ್ಳುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದ್ದು, ವಿಶೇಷವಾಗಿ ಆಟೊ, ಟ್ಯಾಕ್ಸಿ ಚಾಲಕರು, ಬೀದಿಬದಿ ವ್ಯಾಪಾರಿಗಳು, ಸಲೂನ್‍ಗಳು, ಕೃಷಿ, ಕೂಲಿ ಕಾರ್ಮಿಕರು, ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳ ಬದುಕು ಅತಂತ್ರಗೊಂಡಿದೆ. ಸರಕಾರ ಕರ್ಫ್ಯೂ ಆದೇಶವನ್ನು ಮೇ 10ರಿಂದ ಮೇ 24ರವರೆಗೆ ಜಾರಿ ಮಾಡಿದ್ದು, ಇದು ಅಲ್ಲಿಗೆ ಮುಗಿಯುತ್ತದೋ ಇಲ್ಲವೋ ಎಂಬ ಆತಂಕ ಈ ವರ್ಗದ ಜನರನ್ನು ಕಾಡುತ್ತಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿರುವುದು ಹಾಗೂ ಸಾವಿನ ಪ್ರಮಾಣವೂ ಅಧಿಕವಾಗುತ್ತಿರುವುದರಿಂದ ಈ ಲಾಕ್‍ಡೌನ್ ಅವಧಿ ಮೇ 24ರಿಂದ ಮತ್ತೆ ಮುಂದುವರಿದಲ್ಲಿ ಬದುಕುವುದಾದರೂ ಹೇಗೆ? ಸರಕಾರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗುವವರಿಗೆ ಯಾವುದೇ ಪರಿಹಾರದ ಪ್ಯಾಕೆಜ್ ಘೋಷಿಸದೇ ಅವೈಜ್ಞಾನಿಕವಾಗಿ ಲಾಕ್‍ಡೌನ್ ಜಾರಿ ಮಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಸೂಲ್ ಖಾನ್ ಆರೋಪಿಸಿದ್ದಾರೆ.







