ಗುಜರಾತಿನ ಗೋಶಾಲೆಯಲ್ಲೊಂದು ಕೋವಿಡ್ ಕೇಂದ್ರ: ಗೋಮೂತ್ರ, ಹಾಲಿನಿಂದ ತಯಾರಾದ ಔಷಧಿಗಳ ಬಳಕೆ

ಅಹ್ಮದಾಬಾದ್,ಮೇ 9: ದೇಶವನ್ನು ಸಂಕಷ್ಟಕ್ಕೆ ತಳ್ಳಿರುವ ಕೋವಿಡ್ ಎರಡನೇ ಅಲೆಯ ನಡುವೆ ಉತ್ತರ ಗುಜರಾತಿನ ಬನಾಸಕಾಂತಾ ಜಿಲ್ಲೆಯ ದೀಸಾ ತಾಲೂಕಿನ ತೆತೋಡಾ ಗ್ರಾಮದಲ್ಲಿಯ ಗೋಶಾಲೆಯಲ್ಲಿ ಕೊರೋನವೈರಸ್ ರೋಗಿಗಳಿಗಾಗಿ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ.
ಸೌಮ್ಯ ಲಕ್ಷಣಗಳಿರುವ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜಾರಾಮ ಗೋಶಾಲಾ ಆಶ್ರಮದಲ್ಲಿ ಮೇ 5ರಿಂದ ಆರಂಭಗೊಂಡಿರುವ ‘ವೇದಲಕ್ಷಣ ಪಂಚಗವ್ಯ ಆಯುರ್ವೇದ ಕೋವಿಡ್ ಐಸೊಲೇಷನ್ ಸೆಂಟರ್’ನಲ್ಲಿ ಸದ್ಯ ಗ್ರಾಮದ ಏಳು ರೋಗಿಗಳಿಗೆ ಆಕಳ ಹಾಲು,ತುಪ್ಪ ಮತ್ತು ಗೋಮೂತ್ರದಿಂದ ತಯಾರಿಸಲಾದ ಎಂಟು ಆಯುರ್ವೇದ ಔಷಧಿಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇಂದ್ರದಲ್ಲಿ ರೋಗಿಗಳಿಗೆ ನೀಡಲಾಗುತ್ತಿರುವ ಆಯುರ್ವೇದ ಔಷಧಿಗಳ ಕುರಿತು ವಿವರಿಸಿದ ಗೋಧಾಮ ಮಹಾತೀರ್ಥ ಪಥಮೇಡಾದ ಬನಾಸಕಾಂತಾ ಘಟಕದ ಟ್ರಸ್ಟಿ ಮೋಹನ ಜಾಧವ ಅವರು,ಪಂಚಗವ್ಯ ಆಯುರ್ವೇದ ಚಿಕಿತ್ಸೆಯ ಜೊತೆಗೆ ದೇಶಿ ಹಸುಗಳ ಮೂತ್ರ ಮತ್ತು ಇತರ ಮೂಲಿಕೆಗಳಿಂದ ತಯಾರಾದ ಗೋ ತೀರ್ಥ ಮತ್ತು ಕೆಮ್ಮಿಗಾಗಿ ಗೋಮೂತ್ರ ಆಧಾರಿತ ಔಷಧಿಗಳನ್ನು ಬಳಸಲಾಗುತ್ತಿದೆ.
ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಕಳ ಹಾಲಿನಿಂದ ತಯಾರಾದ ಚ್ಯವನಪ್ರಾಶ ಅನ್ನೂ ರೋಗಿಗಳಿಗೆ ನೀಡಲಾಗುತ್ತಿದೆ. ಕೇಂದ್ರದಲ್ಲಿ ಚಿಕಿತ್ಸೆ ಉಚಿತವಾಗಿದ್ದು,ಇಬ್ಬರು ಆಯುರ್ವೇದ ವೈದ್ಯರು ಇದ್ದಾರೆ. ಅಲ್ಲದೆ ಇಬ್ಬರು ಎಂಬಿಬಿಎಸ್ ವೈದ್ಯರು ಕೂಡ ಇದ್ದು ರೋಗಿಗಳಿಗೆ ಅಗತ್ಯವಿದ್ದರೆ ಅಲೋಪತಿ ಔಷಧಿಗಳನ್ನು ನೀಡುತ್ತಾರೆ ಎಂದು ತಿಳಿಸಿದರು.
ಕೋವಿಡ್-19 ಲಕ್ಷಣಗಳಿರುವ ಗ್ರಾಮಸ್ಥರ ಐಸೊಲೇಷನ್ ಮತ್ತು ಚಿಕಿತ್ಸೆಗಾಗಿ ಗ್ರಾಮಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ಸ್ಥಾಪಿಸಲು ಗುಜರಾತ ಸರಕಾರವು ಅನುಮತಿಯನ್ನು ನೀಡಿರುವ ಹಿನ್ನೆಲೆಯಲ್ಲಿ ಈ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ.