ಉಡುಪಿ: ಕೋವಿಡ್‌ಗೆ ಐವರು ಬಲಿ; 962 ಮಂದಿಗೆ ಕೊರೋನ ಪಾಸಿಟಿವ್
ದಿನದಲ್ಲಿ 543 ಮಂದಿ ಗುಣಮುಖ

ಉಡುಪಿ, ಮೇ 9: ಕೋವಿಡ್-19ಕ್ಕೆ ಜಿಲ್ಲೆಯಲ್ಲಿ ರವಿವಾರ ಇನ್ನೂ ಐವರು ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 233ಕ್ಕೇರಿದೆ. ದಿನದಲ್ಲಿ 962 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಅಲ್ಲದೇ 543 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದು, ಸದ್ಯ ಜಿಲ್ಲೆಯಲ್ಲಿ 6372 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ತೀವ್ರ ಸ್ವರೂಪ ತಾಳಿರುವ ಕೋವಿಡ್‌ನ ಎರಡನೇ ಅಲೆಗೆ ಮೇ ತಿಂಗಳ ಬಳಿಕ ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 35ಕ್ಕೇರಿದರೆ, ಇವರಲ್ಲಿ 27 ಮಂದಿ ಕಳೆದ ನಾಲ್ಕು ದಿನಗಳಿಂದ ಮೃತರಾಗಿದ್ದಾರೆ. ಜಿಲ್ಲೆಯ ಜನತೆ ಕೋವಿಡ್‌ನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಕೆಲವು ದಿನಗಳ ಕಾಲ ಮನೆಯಲ್ಲೇ ಇದ್ದು, ಸೋಂಕಿನ ‘ಸಂಪರ್ಕ’ವನ್ನು ತುಂಡರಿಸುವಂತೆ ಡಿಎಚ್‌ಓ ಮನವಿ ಮಾಡಿದ್ದಾರೆ.
ರವಿವಾರ ಸಾವನ್ನಪ್ಪಿದ ಐವರಲ್ಲಿ ನಾಲ್ವರು ಪುರುಷರು (58, 66, 63, 58) ಹಾಗೂ ಒಬ್ಬರು ಮಹಿಳೆ (67ವರ್ಷ). ಇವರು ಕ್ರಮವಾಗಿ ಕಾಪು, ಬಡಾಕೆರೆ ನಾಡ, ಕೆಮ್ಮಣ್ಣು, ಅಂಬಲಪಾಡಿ ಹಾಗೂ ಸೇನಾಪುರದವರು. ಇವರಲ್ಲಿ ಮೂವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಇಬ್ಬರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಇಂದು ಮೃತಪಟ್ಟ ಎಲ್ಲರೂ ಉಸಿರಾಟದ ತೊಂದರೆ, ಜ್ವರ ಹಾಗೂ ಕೆಮ್ಮುವಿನಿಂದ ನರಳುತಿದ್ದು, ಇದರೊಂದಿಗೆ ಕೆಲವರು ನ್ಯೂಮೋನಿಯಾ, ರಕ್ತದೊತ್ತಡ, ಮಧುಮೇಹ ಕಾಯಿಲೆಯನ್ನು ಹೊಂದಿದ್ದರು. ಮೂವರು ಶನಿವಾರ ಹಾಗೂ ಇಬ್ಬರು ರವಿವಾರ ಮೃತಪಟ್ಟರು ಎಂದು ತಿಳಿದುಬಂದಿದೆ.
ಇಂದು ಪಾಸಿಟಿವ್ ಬಂದ 962 ಮಂದಿಯಲ್ಲಿ 516 ಮಂದಿ ಪುರುಷರು ಹಾಗೂ 446 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 309, ಕುಂದಾಪುರ ತಾಲೂಕಿನ 266 ಹಾಗೂ ಕಾರ್ಕಳ ತಾಲೂಕಿನ 384 ಮಂದಿ ಇದ್ದು, ಉಳಿದ ಮೂವರು ದ.ಕ., ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ವಿವಿಧ ಕಾರಣಗಳ ಮೇಲೆ ಆಗಮಿಸಿದವರಾಗಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ ಉಡುಪಿ ತಾಲೂಕಿನ 182 ಮಂದಿ ಪ್ರಾಥಮಿಕ ಸಂಪರ್ಕಿತರಾದರೆ, 161 ಐಎಲ್‌ಐಗೆ ತುತ್ತಾದವರು. ಕಾರ್ಕಳ ತಾಲೂಕಿನ 266ಮಂದಿ ಪ್ರಾಥಮಿಕ ಸಂಪರ್ಕಿತರು ಹಾಗೂ 117 ಮಂದಿ ಐಎಲ್‌ಐ, ಕುಂದಾಪುರ ತಾಲೂಕಿನ 124 ಮಂದಿ ಪ್ರಾಥಮಿಕ ಸಂಪರ್ಕಿತರಿದ್ದರೆ 105 ಮಂದಿ ಐಎಲ್‌ಐ ಎಂದು ಡಿಎಚ್‌ಓ ಹೇಳಿದರು.
ಶನಿವಾರ 543 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿ ಕೊಂಡವರ ಸಂಖ್ಯೆ ಈಗ 33,273 ಕ್ಕೇರಿದೆ. ನಿನ್ನೆ ಜಿಲ್ಲೆಯ 2550 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿ ದ್ದಾರೆ. ಇಂದಿನ 962 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 39,878 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,28,500 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಲಸಿಕೆ: ರವಿವಾರ ಜಿಲ್ಲೆಯಲ್ಲಿ 45 ವರ್ಷ ಮೇಲಿನ ಕೇವಲ 11 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ ಎಂದು ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.







