ಮೇ11-14: ಶೀರೂರು ಮೂಲ ಮಠದಲ್ಲೇ ಅನಿರುದ್ಧ ಸರಳತ್ತಾಯ ಸನ್ಯಾಸ ಸ್ವೀಕಾರ

ಉಡುಪಿ, ಮೇ 9: ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ನಿಧನದಿಂದ ತೆರವಾಗಿರುವ ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಉಡುಪಿಯ ಅನಿರುದ್ಧ ಸರಳತ್ತಾಯ (16)ರ ಸನ್ಯಾಸ ಸ್ವೀಕಾರ ಹಾಗೂ ಶಿರೂರು ಮಠದ ಯತಿಯಾಗಿ ಪಟ್ಟಾಭಿಷೇಕ ಕಾರ್ಯಕ್ರಮ ಮೇ 11ರಿಂದ 14ರವರೆಗೆ ಹಿರಿಯಡ್ಕ ಸಮೀಪದ ಶಿರೂರು ಮೂಲಮಠದಲ್ಲಿ ನಡೆಯಲಿದೆ.
ಶಿರೂರು ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಜವಾಬ್ದಾರಿಯನ್ನು ಹೊಂದಿರುವ ಶಿರೂರು ಮಠದ ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಈ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ ಎಂದು ಶಿರೂರು ಮಠದ ವ್ಯವಸ್ಥಾಪಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮೊದಲು ಅನಿರುದ್ಧ ಸರಳತ್ತಾಯರ ಸನ್ಯಾಸ ಸ್ವೀಕಾರ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮವನ್ನು ಮೇ 11ರಿಂದ 14ರವರೆಗೆ ಶಿರಸಿಯ ಸೋಮದಾ ಕ್ಷೇತ್ರದಲ್ಲಿ ಆಯೋಜಿಸಲು ಸೋದೆ ಶ್ರೀಗಳು ನಿರ್ಧರಿಸಿದ್ದರು. ಆದರೆ ಕೋವಿಡ್-19ರ ಎರಡನೇ ಅಲೆಯ ಕಾರಣ ಸರಕಾರದ ಕಠಿಣ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಇದೀಗ ಕಾರ್ಯಕ್ರಮವನ್ನು ಶಿರೂರು ಮಲ ಮಠದಲ್ಲೇ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸನ್ಯಾಸಾಶ್ರಮ ಸ್ವೀಕರಿಸುವ ವಟುವು ಈಗಾಗಲೇ ತನ್ನ ಪೋಷಕರೊಂದಿಗೆ ಕೆಲವು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಉಡುಪಿಗೆ ಹಿಂದಿರುಗಿದ್ದು, ಉಡುಪಿಯ ಅಷ್ಟಮಠಗಳ ಯತಿಗಳ ಆಶೀರ್ವಾದದೊಂದಿಗೆ ಫಲಮಂತ್ರಾಕ್ಷತೆಯನ್ನು ಸ್ವೀಕರಿಸಿದ್ದಾರೆ. ಪೂರ್ವನಿಗದಿಯಾದಂತೆ ಮೇ 11ರಿಂದ 14ರವರೆಗೆ ಶಿರೂರು ಮೂಲಮಠದಲ್ಲೇ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ ಎಂದು ಶಿರೂರು ಮಠದ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.







