ಭಾರತದಲ್ಲಿ ಕೊರೋನ ಸೋಂಕಿನ ಹೊಸ ಪ್ರಬೇಧ ಲಸಿಕೆಗೂ ಸವಾಲಾಗಬಹುದು
ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳ ಆತಂಕ

ವಿಶ್ವಸಂಸ್ಥೆ, ಮೇ 9: ಭಾರತದಲ್ಲಿ ಹರಡುತ್ತಿರುವ ಕೊರೋನ ಸೋಂಕಿನ ಹೊಸ ಪ್ರಬೇಧ ಹೆಚ್ಚು ಸಾಂಕ್ರಾಮಿಕವಾಗಿದ್ದು ಲಸಿಕೆಯಿಂದ ಒದಗುವ ಸುರಕ್ಷಾ ಪರಿಧಿಯಿಂದ ನುಣುಚಿಕೊಳ್ಳಲು ಶಕ್ತವಾಗಿರುವ ಸಾಧ್ಯತೆಯಿದೆ. ದೇಶದಲ್ಲಿ ಸೋಂಕಿನ ಎರಡನೇ ಅಲೆ ನಿಯಂತ್ರಣ ಮೀರಿ ಉಲ್ಬಣಿಸಲು ಈ ಅಂಶಗಳೂ ಕಾರಣವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅಭಿಪ್ರಾಯಪಟ್ಟಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಅವಳಿ ರೂಪಾಂತರಿತ ವೈರಸ್ ಎಂದೇ ಕರೆಯಲಾಗುವ ಬಿ.1.617 ಪ್ರಬೇಧವು ಕಳೆದ ಅಕ್ಟೋಬರ್ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಹೊಸ ಪ್ರಬೇಧದಲ್ಲಿ ಸೋಂಕಿನ ಎರಡು ತಳಿಗಳಿವೆ. ಬ್ರೆಝಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಉಲ್ಬಣಗೊಂಡಿರುವ ಇ484ಕೆ ಪ್ರಬೇಧ ಮತ್ತು ಎಲ್452ಆರ್ ಪ್ರಬೇಧಗಳು ಒಟ್ಟು ಸೇರಿದ ಹೊಸ ರೂಪಾಂತರಿತ ಪ್ರಬೇಧಕ್ಕೆ ಬಿ.1.617 ಎಂದು ಹೆಸರಿಸಲಾಗಿದೆ. ಇದು ಅತ್ಯಂತ ವೇಗವಾಗಿ ಪ್ರಸಾರವಾಗುವ ಇ484ಕೆ ಪ್ರಬೇಧ ಮತ್ತು ಲಸಿಕೆಯ ಸುರಕ್ಷಾ ಪರಿಧಿಯಿಂದ ನುಣುಚಿಕೊಳ್ಳುವ ಎಲ್452ಆರ್ ಪ್ರಬೇಧಗಳ ಸಮ್ಮಿಶ್ರ ತಳಿಯಾಗಿದೆ.
ಹೊಸ ಪ್ರಬೇಧ 17 ರಾಷ್ಟ್ರಗಳಲ್ಲಿ ಕಂಡುಬಂದಿರುವುದಾಗಿ ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದರೆ ಪ್ರಸಕ್ತ ಹೊಸ ಪ್ರಬೇಧವನ್ನು " ವೇರಿಯೆಂಟ್ ಆಫ್ ಇಂಟರೆಸ್ಟ್’ ಶ್ರೇಣಿಯಲ್ಲಿ ಇರಿಸಲಾಗಿದೆ(ಈ ಶ್ರೇಣಿಯ ವೈರಸ್ ಈ ಹಿಂದಿನ ಸೋಂಕು ಅಥವಾ ಲಸಿಕೀಕರಣದಿಂದ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳನ್ನು ತಟಸ್ಥಗೊಳಿಸುತ್ತದೆ). ಆದರೆ ಇದನ್ನು "ವೇರಿಯೆಂಟ್ ಆಫ್ ಕನ್ಸರ್ನ್’ ಶ್ರೇಣಿಗೆ ವರ್ಗಾಯಿಸುವ ಬಗ್ಗೆಯೂ ಶೀಘ್ರ ನಿರ್ಧರಿಸಲಾಗುತ್ತದೆ (ಈ ಶ್ರೇಣಿಯ ವೈರಸ್ ಹೆಚ್ಚಿನ ವೇಗದಲ್ಲಿ ಪ್ರಸಾರವಾಗುವ ಜೊತೆಗೆ, ದೇಹದಲ್ಲಿರುವ ಪ್ರತಿಕಾಯಗಳನ್ನು ತಟಸ್ಥಗೊಳಿಸುತ್ತದೆ) ಎಂದು ಸೌಮ್ಯಾ ಸ್ವಾಮಿನಾನ್ ಹೇಳಿದ್ದಾರೆ.
ಭಾರತದಲ್ಲಿ ಕೊರೋನ ಸೋಂಕು ಭಾರೀ ಪ್ರಮಾಣದಲ್ಲಿ ಉಲ್ಬಣಿಸಿರುವುದರಿಂದ ಹೊಸ ಮತ್ತು ಇನ್ನಷ್ಟು ಅಪಾಯಕಾರಿ ಪ್ರಬೇಧಗಳು ಉತ್ಪತ್ತಿಯಾಗುವ ಅಪಾಯವಿದೆ. ವೈರಸ್ ಹರಡುವಿಕೆಯ ಪ್ರಮಾಣ ಹೆಚ್ಚಿದಂತೆಲ್ಲಾ ಹೊಸ ಪ್ರಬೇಧದ ಅಪಾಯ ಹೆಚ್ಚಿದೆ. ಹೀಗೆ ಹಲವು ಪ್ರಬೇಧಗಳು ಒಟ್ಟುಸೇರಿದ ಹೊಸ ವೈರಸ್ ಈಗ ಪಡೆಯುತ್ತಿರುವ ಲಸಿಕೆಯನ್ನೂ ನಿಷ್ಪಲಗೊಳಿಸಬಹುದು ಎಂದವರು ಆತಂಕ ಸೂಚಿಸಿದ್ದಾರೆ. ಈಗ ನಡೆಯುತ್ತಿರುವ ಲಸಿಕೆ ಅಭಿಯಾನದ ವೇಗ ಹೆಚ್ಚುವ ಅಗತ್ಯವಿದೆ. ಇದೇ ವೇಗದಲ್ಲಿ ಮುಂದುವರಿದರೆ ದೇಶದ 130 ಕೋಟಿ ಜನಸಂಖ್ಯೆಗೆ ಲಸಿಕೆ ಹಾಕಬೇಕಿದ್ದರೆ ಇನ್ನೂ ಹಲವು ತಿಂಗಳ ಅಗತ್ಯವಿದೆ ಎಂದವರು ಹೇಳಿದ್ದಾರೆ.
ಜನ ಗುಂಪುಗೂಡುತ್ತಿರುವುದೇ ಸಮಸ್ಯೆ
ಭಾರತದಂತಹ ಬೃಹತ್ ದೇಶದಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ನಿಯಂತ್ರಣ ಮೀರಲು ರೂಪಾಂತರಿತ ವೈರಸ್ನ ಪ್ರಬೇಧ ಮಾತ್ರ ಕಾರಣವಲ್ಲ. ಇಲ್ಲಿ ಬೃಹತ್ ಪ್ರಮಾಣದಲ್ಲಿ ಜನ ಒಂದೆಡೆ ಗುಂಪುಗೂಡುತ್ತಿದ್ದಾರೆ. ಸುರಕ್ಷಿತ ಅಂತರ ಪಾಲನೆಯ ನಿಯಮದ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ. ಒಂದು ಹಂತದಲ್ಲಿ ಭಾರತದಲ್ಲಿ ಕೊರೋನ ಸೋಂಕಿನ ಪ್ರಸರಣದ ಪ್ರಮಾಣ ಅತ್ಯಂತ ಕೆಳಮಟ್ಟಕ್ಕೆ ಇಳಿದಿತ್ತು. ಆದರೆ ಈ ಸಮಯದಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಂಡಿದ್ದರೆ, ಜಾಗರೂಕರಾಗಿದ್ದಲ್ಲಿ ಸೋಂಕನ್ನು ಸಂಪೂರ್ಣ ನಿಯಂತ್ರಿಸಬಹುದಿತ್ತು. ಆದರೆ ಲಕ್ಷಾಂತರ ಜನ ಒಂದೆಡೆ ಸೇರತೊಡಗಿದರು. ಇದರಿಂದ ಸೋಂಕು ಮಿತಿಮೀರಿದ ವೇಗದಲ್ಲಿ ಹರಡಿತು ಎಂದು ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.