ಉಡುಪಿಯಲ್ಲಿ ಸಂಪೂರ್ಣ ಲಾಕ್‌ಡೌನ್: 32 ಚೆಕ್‌ಪೋಸ್ಟ್‌ಗಳ ನಿರ್ಮಾಣ
ಉಡುಪಿ, ಮೇ 9: ಸೋಮವಾರದಿಂದ ಜಾರಿಗೆ ಬರಲಿರುವ ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಸೇರಿದಂತೆ ಒಟ್ಟು 32 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಶಿರೂರು, ಹೆಜಮಾಡಿ, ಹೆಬ್ರಿ, ಕೊಲ್ಲೂರು, ಕಾರ್ಕಳ ಮಾಳ, ಬೆಳ್ಮಣ್ ಸೇರಿ ದಂತೆ ಎಂಟು ಕಡೆಗಳಲ್ಲಿ ಅಂತರ್ ಜಿಲ್ಲೆಯನ್ನು ಸಂಪರ್ಕಿಸುವ ಜಿಲ್ಲೆಯ ಗಡಿ ಪ್ರದೇಶದಲ್ಲಿ ಹಾಗೂ ಉಡುಪಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಒಟ್ಟು 32 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎಸ್ಪಿ ವಿಷ್ಣು ವರ್ಧನ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 150 ಹೋಮ್‌ಗಾರ್ಡ್, ಹೆಚ್ಚುವರಿ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಅದೇ ರೀತಿ ಟ್ರಾಪಿಕ್ ಪೋಲೀಸ್ ಸಿಬ್ಬಂದಿ ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಯಾವುದೇ ಕಾರಣಕ್ಕೂ ಅಗತ್ಯ ವಸ್ತುಗಳ ಖರೀದಿಗೆ ವಾಹನ ಬಳಸಿದರೆ ಮುಟ್ಟುಗೋಲು ಹಾಕಿ ಪ್ರಕರಣ ದಾಖಲಿಸಿಕೊಳ್ಳಲಾಗು ವುದು ಎಂದು ಅವರು ತಿಳಿಸಿದ್ದಾರೆ.
ಈವರೆಗೆ ಒಟ್ಟು 773 ವಾಹನಗಳು ವಶ
ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸಿದ ಒಟ್ಟು 773 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕೋವಿಡ್-19 ನಿಯಮ ಉಲ್ಲಂಘಿಸಿದ ಬಗ್ಗೆ ಒಟ್ಟು 91 ಪ್ರಕರಣಗಳನ್ನು ದಾಖಲಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು ಒಟ್ಟು 79(ಉಡುಪಿ-21, ಕಾರ್ಕಳ- 11, ಕುಂದಾಪುರ-47) ದ್ವಿಚಕ್ರ ವಾಹನ, 2(ಕಾರ್ಕಳ-1, ಕುಂದಾಪುರ-1) ತ್ರಿಚಕ್ರ ವಾಹನ ಮತ್ತು ಐದು(ಕುಂದಾಪುರ-5) ಕಾರುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿರುವ ಬಗ್ಗೆ ಒಟ್ಟು 18(ಉಡುಪಿ-9, ಕಾರ್ಕಳ-4, ಕುಂದಾಪುರ-5) ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.







