ಚಿಕ್ಕಮಗಳೂರು: ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಕಳಪೆ ಊಟ ಪೂರೈಕೆ; ಆರೋಪ
ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಸೋಂಕಿತ

ಚಿಕ್ಕಮಗಳೂರು: ಕೋವಿಡ್ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರಿಗೆ ನೀಡುವ ಊಟ ಸರಿಯಿಲ್ಲ. ಗುಣಮಟ್ಟದಿಂದ ಕೂಡಿಲ್ಲ ಎಂದು ಸೋಂಕಿತರೊಬ್ಬರು ವೀಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋವಿಡ್ ಸೋಂಕಿಗೆ ಒಳಗಾಗಿ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೋವಿಡ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತನೋರ್ವ ಆಸ್ಪತ್ರೆಯಿಂದ ವೀಡಿಯೊ ಮಾಡಿದ್ದು, ಆಸ್ಪತ್ರೆಯಲ್ಲಿ ಚೆನ್ನಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರು ಸಮಯಕ್ಕೆ ಸರಿಯಾಗಿ ಬಂದು ತಪಾಸಣೆ ಮಾಡುತ್ತಿದ್ದಾರೆ. ಆದರೆ, ಊಟ ತಿಂಡಿ ಸರಿಯಿಲ್ಲ ಎಂದು ದೂರಿದ್ದಾರೆ.
ಪ್ರತೀ ದಿನ ಒಂದೇ ರೀತಿಯ ಊಟ ನೀಡುತ್ತಾರೆ. ಆ ಊಟ ಗುಣಮಟ್ಟದಿಂದ ಕೂಡಿಲ್ಲ. ರುಚಿಯಾಗಿಲ್ಲ. ಬೆಳಗ್ಗೆ ನೀಡುವ ತಿಂಡಿಯೂ ಚೆನ್ನಾಗಿರುವುದಿಲ್ಲ. ಅದನ್ನು ತಿನ್ನುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಊಟ ತಿಂಡಿಯಲ್ಲಾಗುತ್ತಿರುವ ಲೋಪವನ್ನು ತಕ್ಷಣ ಸರಿಪಡಿಸಬೇಕೆಂದು ಸೋಂಕಿತರು, ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.







