'ದೇಶಕ್ಕಾಗಿ ನಾವು' ಸಂಘಟನೆಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹ
ಮಂಗಳೂರು : ಚಾಮರಾಜ ನಗರದಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ 24 ಜನರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ 'ದೇಶಕ್ಕಾಗಿ ನಾವು 'ಎಂಬ ಸ್ವಯಂಪ್ರೇರಿತ ಸಂಘಟನೆ ಯಿಂದ ಸೋಮವಾರ ತನ್ನ ನಿವಾಸದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಕೈ ಗೊಳ್ಳುತ್ತಿದ್ದೇನೆ ಎಂದು ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಆಮ್ಲಜನಕದ ಕೊರತೆಯಿಂದಾಗಿ ಕರ್ನಾಟಕದ ಚಾಮರಾಜ ನಗರದಲ್ಲಿ ಸಾವಿಗೀಡಾದ ಘಟನೆಯ ಸಂತ್ರಸ್ತರ ಕುಟುಂಬಕ್ಕೆ ತಲಾ 25 ಲಕ್ಷ ರೂ ಪರಿಹಾರ ನೀಡಬೇಕು.ಈ ಘಟನೆಯ ಬಗ್ಗೆ ನೈತಿಕ ಹೊಣೆ ವಹಿಸದೆ ಇರುವ ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು. ಕೋವಿಡ್ ನಿರ್ವಹಣೆ ಯಲ್ಲಿ ಸರಕಾರ ಸಂಪೂರ್ಣ ವಿಫಲ ವಾಗಿದೆ. ಆಮ್ಲಜನಕದ ಕೊರತೆಯಿಂದ ಕೇವಲ 3 ಜನರು ಸಾವನ್ನಪ್ಪಿದ್ದಾರೆ ಎಂದು ಈ ಹಿಂದೆ ಆರೋಗ್ಯ ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡೆತ್ ಆಡಿಟ್ ವರದಿಯು ಸಚಿವರ ಹೇಳಿಕೆಗೆ ವಿರುದ್ಧವಾಗಿದೆ. ಎಲ್ಲಾ 24 ಸಾವುಗಳು ಕೋವಿಡ್ ನಿಂದ ಸಂಭವಿಸಿವೆ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. ಮಾನವ ದುರಂತದ ತನಿಖೆಗಾಗಿ ಸರ್ಕಾರದ ಕ್ರಮದ ಬಗ್ಗೆ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ ಮತ್ತು ಸತ್ಯವನ್ನು ಹತ್ತಿಕ್ಕಲು ಸರ್ಕಾರ ಎಲ್ಲಾ ರೀತಿಯ ತಂತ್ರಗಳನ್ನು ಮಾಡುತ್ತಿದೆ. ಈ ಸತ್ಯಾಗ್ರಹವನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ದೇಶಕ್ಕಾಗಿ ನಾವು ಬ್ಯಾನರ್ ಅಡಿಯಲ್ಲಿ ಆಯೋಜಿಸಲಾಗುವುದು ಎಂದು ಪಿ.ವಿ.ಮೋಹನ್ ತಿಳಿಸಿದ್ದಾರೆ.







