ಕೋವಿಡ್ ಸೋಂಕಿತರಿಗೆ ಆಮ್ಲಜನಕ ಪೂರೈಕೆ ಆರಂಭಿಸಿದ ಸಿಖ್ ಸಂಘಟನೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಮೇ 9: ಕೊರೋನ ಸೋಕಿನಿಂದ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯೊಂದಿಗೆ ಸಂಯೋಜನೆಗೊಂಡಿರುವ ಯುನೈಟೆಡ್ ಸಿಖ್ಸ್ ಎಂಬ ಮಾನವ ಹಕ್ಕುಗಳ ಸಂಘಟನೆ ದೇಶದಲ್ಲಿ ಕೊರೋನ ಸೋಂಕಿತರಿಗೆ ಆಮ್ಲಜನಕ ಸಾಂದ್ರಕಗಳನ್ನು ಪೂರೈಸುವ ಉಪಕ್ರಮ ಆರಂಭಿಸಿದೆ ಎಂದು ವರದಿಯಾಗಿದೆ.
ದಿಲ್ಲಿ, ಪಂಜಾಬ್ ಮತ್ತು ಕರ್ನಾಟಕದಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಒದಗಿಸಲಾಗಿದೆ. ಕೊರೋನ ಸೋಂಕಿತರಿಗೆ ನೆರವಾಗಲು ಸಂಘಟನೆ ವೈದ್ಯಕೀಯ ಸಾಧನಗಳನ್ನು ಸಂಗ್ರಹಿಸುತ್ತಿದೆ. ಅಮೆರಿಕದಿಂದ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳಲಾಗಿದ್ದು ಅಗತ್ಯವಿರುವವರು ಸಂಘಟನೆಯ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಬೇಡಿಕೆ ಸಲ್ಲಿಸಬಹುದು.
ದೇಶದ ವೈದ್ಯಕೀಯ ವ್ಯವಸ್ಥೆಗೆ ನೆರವಾಗಲು ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸುತ್ತಿದ್ದೇವೆ. ಕೊರೋನ ಸೋಂಕಿತರು ಇರುವ ಸ್ಥಳಕ್ಕೇ ಆಮ್ಲಜನಕ ಸಾಂದ್ರಕಗಳನ್ನು ರವಾನಿಸಲಾಗುವುದು. ಅವರು ನಾಲ್ಕೈದು ದಿನ ಬಳಸಿ, ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಸಾಂದ್ರಕಗಳನ್ನು ನಮಗೆ ಮರಳಿಸಬೇಕು. ಲಭ್ಯತೆಯ ಆಧಾರದಲ್ಲಿ ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಪೂರೈಸಲಾಗುವುದು ಎಂದು ಯುನೈಟೆಡ್ ಸಿಖ್ನ ನಿರ್ದೇಶಕ ಜಸ್ಮೀತ್ ಸಿಂಗ್ ಹೇಳಿದ್ದಾರೆ.
ದಿಲ್ಲಿಯಲ್ಲಿ ಈ ಸಂಘಟನೆ ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಮೃತರ ಕುಟುಂಬದವರಿಗೆ ನೆರವಾಗುತ್ತಿದೆ. ದಿನಾ ಕನಿಷ್ಟ 15 ಜನರ ಅಂತ್ಯಸಂಸ್ಕಾರಕ್ಕೆ ನೆರವಾಗುತ್ತಿದೆ ಎಂದು ಅವರು ಹೇಳಿದ್ದಾರೆ.







