ಬೀದಿಬದಿ ಪ್ರಾಣಿಗಳಿಗೆ ಆಹಾರ ಪೂರೈಕೆಗೆ ಒಡಿಶಾ ಮುಖ್ಯಮಂತ್ರಿಯಿಂದ 60 ಲಕ್ಷ ರೂ. ಬಿಡುಗಡೆ

ಹೊಸದಿಲ್ಲಿ, ಮೇ 9: ರಾಜ್ಯದ ವಿವಿಧ ಭಾಗಗಳಲ್ಲಿ ಜಾರಿಗೊಳಿಸಲಾದ ಲಾಕ್ಡೌನ್ ಸಂದರ್ಭ ಬೀದಿ ಬದಿ ಪ್ರಾಣಿಗಳಿಗೆ ಆಹಾರ ಪೂರೈಸಲು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 60 ಲಕ್ಷ ರೂಪಾಯಿ ಮಂಜೂರು ಮಾಡಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಧಿ (ಸಿಎಂಆರ್ ಎಫ್)ಯಿಂದ ಈ ಹಣ ಮಂಜೂರು ಮಾಡಲಾಗಿದೆ. ದೇಶದ ಇತರ ಭಾಗಗಳಂತೆ ಒಡಿಶಾದಲ್ಲಿ ಕೂಡ ಕೊರೋನ ಸೋಂಕು ಹರಡುವುದನ್ನು ತಡೆಯಲು ಸರಕಾರ ನಿಯಂತ್ರಣಾ ಕ್ರಮಗಳನ್ನು ಕೈಗೊಂಡಿದೆ. 5 ಮೆಟ್ರೋಪಾಲಿಟಿನ್ ಕಾರ್ಪೋರೇಶನ್, 48 ಮುನ್ಸಿಪಾಲಿಟಿಗಳು ಹಾಗೂ 61 ಅಧಿಸೂಚಿತ ನಗರ ಸಭೆ ಪ್ರದೇಶದಲ್ಲಿ ನಿರ್ಬಂಧ ಹೇರಲಾಗಿದೆ.
‘‘ಲಾಕ್ಡೌನ್ ಕಾರಣದಿಂದ ಬೀದಿ ನಾಯಿ ಹಾಗೂ ಜಾನುವಾರುಗಳಂತಹ ಪ್ರಾಣಿಗಳು ಆಹಾರದ ಕೊರತೆ ಎದುರಿಸುತ್ತಿವೆ’’ ಎಂದು ಒಡಿಸಾ ಲೋಕೋಪಯೋಗಿ ಇಲಾಖೆ ಟ್ವೀಟ್ ಮಾಡಿದೆ. ಲಾಕ್ಡೌನ್ ಹೇರಲಾದ ಪ್ರದೇಶಗಳಲ್ಲಿ ಸ್ಥಳೀಯರು ಬೀದಿ ಬದಿ ಪ್ರಾಣಿಗಳಿಗೆ ಆಹಾರ ಪೂರೈಸಲು ಸಾಧ್ಯವಾಗದ ಹಿನ್ನ್ನೆಲೆಯಲ್ಲಿ ಒಡಿಶಾ ಸರಕಾರ ಈ ವ್ಯವಸ್ಥೆ ಮಾಡಿದೆ.
ಸ್ವಯಂ ಸೇವಕರು ಹಾಗೂ ಸ್ವಯಂ ಸೇವಕ ಸಂಘಟನೆಗಳ ಮೂಲಕ ಈ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಡುಗಡೆ ಮಾಡಿದ ಹಣದಿಂದ ಈ ಉದ್ದೇಶಕ್ಕೆ ಭುವನೇಶ್ವರ, ಕಟಕ್, ಸಾಂಬಾಲ್ಪುರ, ರೂರ್ಕೆಲಾ ಹಾಗೂ ಬ್ರಹ್ಮಪುರ ಮೆಟ್ರೋಪಾಲಿಟಿನ್ ಕಾರ್ಪೋರೇಶನ್ ಪ್ರತಿ ದಿನ 20 ಸಾವಿರ ರೂಪಾಯಿ ಬಳಸಲು ಅವಕಾಶ ನೀಡಲಾಗಿದೆ. ಇದೇ ರೀತಿ ನಗರಸಭೆಗಳು ಪ್ರತಿ ದಿನ 5 ಸಾವಿರ ರೂಪಾಯಿ ಹಾಗೂ ಎನ್ಎಸಿಗಳು ಪ್ರತಿದಿನ 2 ಸಾವಿರ ರೂಪಾಯಿ ವೆಚ್ಚ ಮಾಡಲು ಅವಕಾಶ ನೀಡಲಾಗಿದೆ.