ಖ್ಯಾತ ವಿಜ್ಞಾನಿ, ಸಿಪಿಎಂ ಹಿರಿಯ ಸದಸ್ಯ ಮಹಾವೀರ್ ನರ್ವಾಲ್ ಕೋವಿಡ್ ನಿಂದ ನಿಧನ

ಹೊಸದಿಲ್ಲಿ: ಖ್ಯಾತ ವಿಜ್ಞಾನಿ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾರ್ಕ್ಸ್‌ವಾದಿ)ಹಿರಿಯ ಸದಸ್ಯ ಮಹಾವೀರ್ ನರ್ವಾಲ್ ಕೊರೋನವೈರಸ್ ಸೋಂಕಿನಿಂದ ರವಿವಾರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಹಾವೀರ್ ಅವರ ಪುತ್ತಿ ಪಿಂಜ್ರಾ ಟಾಡ್ ಕಾರ್ಯಕರ್ತೆ ನತಾಶಾ ನರ್ವಾಲ್ ಜೈಲಿನಲ್ಲಿದ್ದಾರೆ, 2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದಿಲ್ಲಿ ಗಲಭೆಯಲ್ಲಿ ಪೂರ್ವಭಾವಿ ಪಿತೂರಿಯ ಭಾಗವಾಗಿದ್ದ ಆರೋಪದ ಮೇಲೆ ನತಾಶಾ ಅವರನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಬಂಧಿಸಲಾಗಿತ್ತು. ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ನತಾಶಾರನ್ನು ಹೆಸರಿಸಲಾಗಿದೆ. ನಟಾಶಾರನ್ನು ತಿಹಾರ್ ಜೈಲಿನಲ್ಲಿ ಇಡಲಾಗಿದೆ.
ಜೈಲಿನಲ್ಲಿದ್ದ ತನ್ನ ಮಗಳೊಂದಿಗೆ ಮಹಾವೀರ್ ನರ್ವಾಲ್ ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಅವರ ಮಗ ಆಕಾಶ್, ಕೋವಿಡ್-19 ಪಾಸಿಟಿವ್ ಆಗಿದ್ದುರೋಹ್ಟಕ್ ನಲ್ಲಿ ತನ್ನ ತಂದೆಯೊಂದಿಗೆ ಇದ್ದರು ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಮಹಾವೀರ್ ನರ್ವಾಲ್ ಸಾವಿಗೆ ಟ್ವಿಟ್ಟರ್ ನಲ್ಲಿ ಸಂತಾಪ ಸಂದೇಶಗಳು ಹರಿದು ಬಂದಿವೆ.
ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ 'ರಾಜಕೀಯ ಕೈದಿಗಳನ್ನು' ಜೈಲುಗಳಿಂದ ಬಿಡುಗಡೆ ಮಾಡಬೇಕೆಂದು ಎಡಪಂಥೀಯ ಕಾರ್ಯಕರ್ತರು ಹಾಗೂ ನಾಗರಿಕ ಸಮಾಜ ಗುಂಪುಗಳು ಇತ್ತೀಚೆಗೆ ಒತ್ತಾಯಿಸಿದ್ದವು.