ಉ.ಪ್ರ.: ಕೊರೋನ ಸೋಂಕಿಗೆ ಮಹಿಳೆ ಬಲಿ; ವಿಳಂಬ ಆರೋಪಿಸಿ ಕುಟುಂಬಿಕರಿಂದ ಆಸ್ಪತ್ರೆ ಸಿಬ್ಬಂದಿಗೆ ಹಲ್ಲೆ

ಲಕ್ನೋ, ಮೇ 9: ದಾಖಲಾತಿ ಹಾಗೂ ಆಮ್ಲಜನಕ ಪೂರೈಕೆಗೆ ವಿಳಂಬ ಮಾಡಲಾಗಿದೆ ಎಂದು ಆರೋಪಿಸಿ ಕೊರೋನ ಸೋಂಕಿನಿಂದ ಮೃತಪಟ್ಟ 65 ವರ್ಷ ಮಹಿಳೆಯ ಕುಟುಂಬದ ಸದಸ್ಯರು ನಡೆಸಿದ ಹಲ್ಲೆಯಿಂದ ಇಬ್ಬರು ವೈದ್ಯರು ಹಾಗೂ ಹಲವು ಆರೋಗ್ಯ ಕಾರ್ಯಕರ್ತರ ಗಾಯಗೊಂಡಿರುವ ಘಟನೆ ಇಲ್ಲಿನ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಕೋವಿಡ್ ಸೋಂಕಿತ ಮಹಿಳೆಯನ್ನು ಫೆಫಾನಾ ಗ್ರಾಮದಲ್ಲಿರುವ ಈ ಆಸ್ಪತ್ರೆಯಲ್ಲಿ ಮುಂಜಾನೆ 3 ಗಂಟೆಗೆ ದಾಖಲಿಸಲಾಗಿತ್ತು. ಅವರು ಕೂಡಲೇ ಮೃತಪಟ್ಟಿದ್ದರು ಎಂದು ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.
‘‘ಆಸ್ಪತ್ರೆಯಲ್ಲಿ ದಾಖಲಾತಿಗೆ ನಮ್ಮನ್ನು ಅರ್ಧ ಗಂಟೆಗಳ ಕಾಲ ಕಾಯಿಸಲಾಯಿತು. ದಾಖಲಾದ ಬಳಿಕ ಒಂದು ಗಂಟೆಗಳ ಬಳಿಕ ಆಮ್ಲಜನಕ ನೀಡಲಾಯಿತು ಎಂದು ಮಹಿಳೆಯ ಕುಟುಂಬ ಆರೋಪಿಸಿದೆ’’ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಮೃತಪಟ್ಟ ಬಳಿಕ ಕುಟುಂಬದ ಸದಸ್ಯರು ಆಕ್ರೋಶಿತರಾದರು. ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ ವಹಿಸಿದೆ ಎಂದು ಅವರು ಆರೋಪಿಸಿದರು ಎಂದು ಡಾ. ರಾಜೇಂದ್ರ ಪ್ರಸಾದ್ ಹೇಳಿದ್ದಾರೆ. ಅವರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ. ಅಲ್ಲದೆ, ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಡಾ. ಪ್ರೀತಂ ಕುಮಾರ್ ಪಾಂಡೆ, ಡಾ. ಶರದ್ ಕುಮಾರ್ ಹಾಗೂ ಆರೋಗ್ಯ ಕಾರ್ಯಕರ್ತರಾದ ಕಿಷನ್ ಕುಮಾರ್, ರಿಜ್ವಾನ್ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ಆಸ್ಪತ್ರೆಗೆ ಧಾವಿಸಿದ್ದಾರೆ ಹಾಗೂ ಪ್ರಕರಣ ದಾಖಲಿಸಿದ್ದಾರೆ ಎಂದ ಅವರು ತಿಳಿಸಿದ್ದಾರೆ.