ದೇಶೀಯ, ಆಮದು ಕೋವಿಡ್ ಔಷಧಿಗಳಿಗೆ ಜಿಎಸ್ಟಿ ವಿನಾಯಿತಿ ನೀಡಿದರೆ ಅವು ದುಬಾರಿಯಾಗುತ್ತದೆ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ,ಮೇ 9: ದೇಶದಲ್ಲಿ ತಯಾರಾದ ಮತ್ತು ಆಮದು ಮಾಡಿಕೊಳ್ಳಲಾದ ಕೋವಿಡ್ ಔಷಧಿಗಳು, ಲಸಿಕೆಗಳು ಮತ್ತು ಆಮ್ಲಜನಕ ಸಾಂದ್ರಕಗಳ ಮೇಲಿನ ಜಿಎಸ್ಟಿಯನ್ನು ಮನ್ನಾ ಮಾಡುವುದರಿಂದ ಇನ್ಪುಟ್ ಟ್ಯಾಕ್ಸ್ ಅಥವಾ ಕಚ್ಚಾ ಸಾಮಗ್ರಿಗಳ ಮೇಲೆ ತಾವು ಪಾವತಿಸಿರುವ ತೆರಿಗೆಯನ್ನು ಸರಿದೂಗಿಸಿಕೊಳ್ಳಲು ತಯಾರಕರಿಗೆ ಸಾಧ್ಯವಾಗುವುದಿಲ್ಲ ಮತ್ತು ಅದನ್ನು ಅವರು ಗ್ರಾಹಕರಿಗೆ ವರ್ಗಾಯಿಸುವುದರಿಂದ ಈ ಸಾಮಗ್ರಿಗಳು ಬಳಕೆದಾರರಿಗೆ ಇನ್ನಷ್ಟು ದುಬಾರಿಯಾಗುತ್ತವೆ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ರವಿವಾರ ಸರಣಿ ಟ್ವೀಟ್ ಗಳಲ್ಲಿ ತಿಳಿಸಿದ್ದಾರೆ.
ಹಾಲಿ ಲಸಿಕೆಗಳ ದೇಶಿಯ ಪೂರೈಕೆಗಳು ಮತ್ತು ವಾಣಿಜ್ಯಿಕ ಆಮದಿನ ಮೇಲೆ ಶೇ.5ರಷ್ಟು ಹಾಗೂ ಕೋವಿಡ್ ಔಷಧಿಗಳು ಮತ್ತು ಆಮ್ಲಜನಕ ಸಾಂದ್ರಕಗಳ ಮೇಲೆ ಶೇ.12ರಷ್ಟು ಜಿಎಸ್ಟಿಯನ್ನು ವಿಧಿಸಲಾಗುತ್ತಿದೆ.
ಜಿಎಸ್ಟಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಿದರೆ ಲಸಿಕೆಗಳ ತಯಾರಕರಿಗೆ ತಮ್ಮ ಇನ್ಪುಟ್ ಟ್ಯಾಕ್ಸ್ ನ್ನು ಸರಿದೂಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಬೆಲೆಗಳನ್ನು ಹೆಚ್ಚಿಸುವ ಮೂಲಕ ಅದನ್ನು ಅವರು ಬಳಕೆದಾರರಿಗೆ ವರ್ಗಾಯಿಸುತ್ತಾರೆ. ಹೀಗಾಗಿ ಲಸಿಕೆಗಳ ಮೇಲಿನ ಜಿಎಸ್ಟಿಯನ್ನು ಮನ್ನಾ ಮಾಡುವುದರಿಂದ ಬಳಕೆದಾರರಿಗೆ ಲಾಭಕ್ಕಿಂತ ನಷ್ಟವೇ ಆಗುತ್ತದೆ ಎಂದಿದ್ದಾರೆ.
ಯಾವುದೇ ಸರಕಿನ ಮೇಲೆ 100 ರೂ.ಏಕೀಕೃತ ಜಿಎಸ್ಟಿ (ಐಜಿಎಸ್ಟಿ) ಸಂಗ್ರಹವಾದರೆ ಅದರಲ್ಲಿ 50 ರೂ.ಸಿಜಿಎಸ್ಟಿ ರೂಪದಲ್ಲಿ ಕೇಂದ್ರಕ್ಕೆ ಮತ್ತು 50 ರೂ.ಎಸ್ಜಿಎಸ್ಟಿ ರೂಪದಲ್ಲಿ ರಾಜ್ಯಗಳಿಗೆ ಸೇರುತ್ತವೆ. ಸಿಜಿಎಸ್ಟಿಯಲ್ಲಿಯೂ ಶೇ.41ರಷ್ಟು ಪಾಲು ರಾಜ್ಯಗಳಿಗೆ ಲಭಿಸುತ್ತದೆ. ಹೀಗಾಗಿ 100 ರೂ.ತೆರಿಗೆ ಸಂಗ್ರಹದಲ್ಲಿ 70.50 ರೂ.ರಾಜ್ಯಗಳಿಗೆ ದೊರೆಯುತ್ತದೆ. ಇದು ಲಸಿಕೆಗಳಿಗೂ ಅನ್ವಯಿಸುತ್ತದೆ ಎಂದು ಸೀತಾರಾಮನ್ ವಿವರಿಸಿದ್ದಾರೆ.
ವಾಸ್ತವದಲ್ಲಿ ಶೇ.5ರಷ್ಟು ನಾಮಮಾತ್ರ ಜಿಎಸ್ಟಿಯು ಲಸಿಕೆಗಳ ದೇಶಿಯ ತಯಾರಕರು ಮತ್ತು ಪ್ರಜೆಗಳ ಹಿತಾಸಕ್ತಿಗಳಿಗೆ ಪೂರಕವಾಗಿದೆ ಎಂದಿದ್ದಾರೆ. ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಾಂಕ್ರಾಮಿಕದ ವಿರುದ್ಧ ರಾಜ್ಯ ಸರಕಾರದ ಹೋರಾಟಕ್ಕೆ ನೆರವಾಗಲು ದೇಣಿಗೆಯಾಗಿ ನೀಡುವ ಆಮ್ಲಜನಕ ಸಾಂದ್ರಕಗಳು, ಸಿಲಿಂಡರ್ಗಳು,ಕೃಯೊಜೆನಿಕ್ ಸ್ಟೋರೇಜ್ ಟ್ಯಾಂಕರ್ಗಳು ಮತ್ತು ಕೋವಿಡ್-19 ಸಂಬಂಧಿತ ಔಷಧಿಗಳ ಮೇಲಿನ ಜಿಎಸ್ಟಿ ಮತ್ತು ಸೀಮಾ ಸುಂಕವನ್ನು ಮನ್ನಾಗೊಳಿಸುವಂತೆ ಕೋರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರಕ್ಕೆ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರುವ ಸೀತಾರಾಮನ್,ಇವುಗಳ ಮೆಲಿನ ಸೀಮಾಸುಂಕ ಮತ್ತು ಆರೋಗ್ಯ ಸೆಸ್ ಅನ್ನು ಈಗಾಗಲೇ ಮನ್ನಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಉಚಿತವಾಗಿ ವಿತರಿಸಲು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯು ಆಮದು ಮಾಡಿಕೊಳ್ಳುವ ಕೋವಿಡ್ ಪರಿಹಾರ ಸಾಮಗ್ರಿಗಳ ಮೇಲಿನ ಐಜಿಎಸ್ಟಿಯನ್ನು ಸಹ ಮನ್ನಾ ಮಾಡಲಾಗಿದೆ. ಈ ವಿನಾಯಿತಿಯು ಈ ಸರಕುಗಳನ್ನು ಇದೇ ಉದ್ದೇಶದಿಂದ ಉಚಿತವಾಗಿ ಆಮದು ಮಾಡಿಕೊಳ್ಳುವ ಯಾವುದೇ ಸಂಸ್ಥೆ,ರಾಜ್ಯ ಸರಕಾರ,ಪರಿಹಾರ ಏಜೆನ್ಸಿ ಅಥವಾ ಸ್ವಾಯತ್ತ ಸಂಸ್ಥೆಗಳಿಗೂ ಲಭಿಸುತ್ತದೆ. ಈ ಸಾಮಗ್ರಿಗಳ ಲಭ್ಯತೆಯನ್ನು ಹೆಚ್ಚಿಸಲು ಇವುಗಳ ವಾಣಿಜ್ಯಿಕ ಆಮದುಗಳ ಮೇಲಿನ ಮೂಲಗಳು ಸೀಮಾಸುಂಕ ಮತ್ತು ಆರೋಗ್ಯ ಸೆಸ್ಗೂ ಸಂಪೂರ್ಣ ವಿನಾಯಿತಿಯನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ರೆಮ್ಡೆಸಿವಿರ್ ಚುಚ್ಚುಮದ್ದು ಸೇರಿದಂತೆ ಕೋವಿಡ್ ಸಂಬಂಧಿತ ಹಲವಾರು ಪರಿಹಾರ ಸಾಮಗ್ರಿಗಳಿಗೆ ಈಗಾಗಲೇ ಸೀಮಾ ಸುಂಕದಿಂದ ವಿನಾಯಿತಿಯನ್ನು ನೀಡಲಾಗಿದೆ. ಅಲ್ಲದೆ ಮೇ 3ರಿಂದ ದೇಶದಲ್ಲಿ ಉಚಿತ ವಿತರಣೆಗಾಗಿ ದೇಣಿಗೆಯಾಗಿ ಸ್ವೀಕರಿಸಲಾಗುವ ಕೋವಿಡ್ ಪರಿಹಾರ ಸಾಮಗ್ರಿಗಳ ಆಮದುಗಳ ಮೇಲಿನ ಐಜಿಎಸ್ಟಿಗೂ ವಿನಾಯಿತಿ ನೀಡಲಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.