ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಮಮತಾ ಬ್ಯಾನರ್ಜಿ ಮಣೆ

ಕೊಲ್ಕತ್ತಾ, ಮೇ 10: ಸತತ ಮೂರನೇ ಬಾರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಸಂಪುಟ ವಿಸ್ತರಿಸಿದ್ದು, 43 ಮಂದಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಜ್ಜಾಗಿದೆ.
ಮಮತಾ ಬ್ಯಾನರ್ಜಿಯವರ ಮೊದಲ ಎರಡು ಸಂಪುಟಗಳಲ್ಲಿ ಇದ್ದ 17 ಮಂದಿ ಮತ್ತೆ ಸ್ಥಾನ ಉಳಿಸಿಕೊಂಡಿದ್ದರೆ, 16 ಶಾಸಕರಿಗೆ ಮೊದಲ ಬಾರಿ ಸಚಿವರಾಗುವ ಅವಕಾಶ ಲಭಿಸಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ, ಹಿರಿಯ ಮುಖಂಡ ಅಮಿತ್ ಮಿತ್ರಾ ಮತ್ತೆ ಸಂಪುಟ ಸೇರಲಿದ್ದಾರೆ. ಅವರು ಮುಂದಿನ ಆರು ತಿಂಗಳ ಒಳಗಾಗಿ ವಿಧಾನಸಭೆಗೆ ಆಯ್ಕೆಯಾಗಬೇಕಾಗಿದೆ.
ಮನಸ್ ಭೂನಿಯಾ, ಪುಲಕ್ ರೇ, ರತಿನ್ ಘೋಷ್ ಮತ್ತು ಬಿಪ್ಲಬ್ ಮಿತ್ರಾ ಕೂಡಾ ಸಂಪುಟ ಸೇರಲಿದ್ದು, ಈ ಪೈಕಿ ಘೋಷ್, ರೇ ಹಾಗೂ ಮಿತ್ರಾ ಮೊದಲ ಬಾರಿ ಈ ಅವಕಾಶ ಪಡೆದಿದ್ದಾರೆ. ಪಶ್ಚಿಮ ಮಿಡ್ನಾಪುರ, ಹೌರಾ ಮತ್ತು ದಕ್ಷಿಣ ದಿನಜ್‌ಪುರದಲ್ಲಿ ಇವರು ಟಿಎಂಸಿ ಹೋರಾಟಕ್ಕೆ ಶಕ್ತಿ ತುಂಬಿದ್ದರು. ಕ್ರಿಕೆಟಿಗ ಮನೋಜ್ ತಿವಾರಿ ಮತ್ತು ಮಾಜಿ ಐಪಿಎಸ್ ಅಧಿಕಾರಿ ಹನುಮಾನ್ ಕಬೀರ್ ಕೂಡಾ ಸಚಿವರಾಗುವ ಅವಕಾಶ ಪಡೆದಿದ್ದಾರೆ.
ಎಂಟು ಮಹಿಳೆಯರು ಸಚಿವರಾಗುವ ಅವಕಾಶ ಪಡೆದಿದ್ದು, ಈ ಪೈಕಿ ಶಶಿ ಪಾಂಜಾ ಮಾತ್ರ ಕ್ಯಾಬಿನೆಟ್ ದರ್ಜೆ ಪಡೆದಿದ್ದಾರೆ. ಬುಡಕಟ್ಟು ಪಂಗಡಗಳಿಗೆ ಸೇರಿದ ಸಂಧ್ಯಾರಾಣಿ ತುಡು, ಜ್ಯೋತ್ಸ್ನಾ ಮಂಡಿ ಮತ್ತು ಭಿರ್ಬಾ ಹಂಡ್ಸಾ ಹೀಗೆ ಮೂವರು ಮಹಿಳೆಯರು ಸಚಿವರಾಗುತ್ತಿದ್ದಾರೆ. ಮಮತಾ ಅವರ ಮೊದಲ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದ ಮದನ್ ಮಿತ್ರಾ, ಕಳೆದ ಬಾರಿ ಸಚಿವರಾಗಿದ್ದ ತಪಸ್ ರಾಯ್, ತಪನ್ ದಾಸ್‌ಗುಪ್ತಾ, ಅಸೀಮಾ ಪಾತ್ರಾ, ಮಂತೂರಾಮ್ ಪಕೀರಾ ಅವರು ಸಂಪುಟಕ್ಕೆ ಸೇರ್ಪಡೆಯಾಗಿಲ್ಲ.