ತಿಕ್ರಿಯಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪದ ತನಿಖೆಗೆ ಸಿಟ್ ರಚನೆ

ಹೊಸದಿಲ್ಲಿ, ಮೇ 10: ಕಳೆದ ತಿಂಗಳು ತಿಕ್ರಿ ಗಡಿಯಲ್ಲಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮತ್ತು ಎ.30ರಂದು ಕೊರೋನ ವೈರಸ್ನಿಂದಾಗಿ ಸಾವನ್ನಪ್ಪಿದ ಪಶ್ಚಿಮ ಬಂಗಾಳದ 25 ಹರೆಯದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಲ್ಲಿ ಆರು ಜನರ ವಿರುದ್ಧ ಬಹಾದುರಗಡ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪದ ತನಿಖೆಗಾಗಿ ಡಿಸಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಶನಿವಾರ ಸಂಜೆ ಯುವತಿಯ ತಂದೆ ದೂರು ದಾಖಲಿಸಿದ್ದು, ತನ್ನ ಪುತ್ರಿ ಕಿಸಾನ ಸೋಷಿಯಲ್ ಆರ್ಮಿ ಜೊತೆಗೆ ಗುರುತಿಸಿಕೊಂಡಿದ್ದ ಆರೋಪಿಗಳೊಂದಿಗೆ ಪ್ರಯಾಣಿಸಿದ್ದಳು ಮತ್ತು ಎ.10ರಂದು ಗುಂಪು ತಿರ್ಕಿಗಾಗಿ ಪ.ಬಂಗಾಳದಿಂದ ನಿರ್ಗಮಿಸಿತ್ತು. ರೈಲಿನಲ್ಲಿ ಆರೋಪಿಗಳು ತನ್ನ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದರು ಮತ್ತು ತಿರ್ಕಿ ತಲುಪಿದ ಬಳಿಕ ಆಕೆಯ ಮೇಲೆ ಅತ್ಯಾಚಾರವನ್ನೂ ನಡೆಸಿದ್ದರು ಎಂದು ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಎ.25-26ರ ರಾತ್ರಿ ಯುವತಿಯು ಅಸ್ವಸ್ಥಗೊಂಡಿದ್ದಳು ಮತ್ತು ಆಕೆಯನ್ನು ಬಹಾದುರಗಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಚಿಕಿತ್ಸೆಯನ್ನು ಪಡೆಯುತ್ತಿದ್ದ ಆಕೆ ಎ.30ರಂದು ಸೋಂಕಿಗೆ ಬಲಿಯಾಗಿದ್ದಾಳೆ ಎಂದು ಅವರು ಹೇಳಿದರು.