ಬೈಕ್ ಟ್ಯಾಕ್ಸಿ ಸೌಲಭ್ಯ ಅನುಮತಿ ಕೋರಿ ಅರ್ಜಿ: 2 ತಿಂಗಳೊಳಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ಆದೇಶ

ಬೆಂಗಳೂರು, ಮೇ 10: ಗೋವಾ ರಾಜ್ಯ ಸೇರಿ ಇತರೆ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಿರುವಂತೆ ಕರ್ನಾಟಕದಲ್ಲೂ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಮುಂದಿನ 2 ತಿಂಗಳ ಒಳಗೆ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಈ ಸಂಬಂಧ ಖಾಸಗಿ ಕಂಪೆನಿಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ಈ ನಿರ್ದೇಶನ ನೀಡುವ ಮೂಲಕ ಅರ್ಜಿ ಇತ್ಯರ್ಥಪಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಕೇಂದ್ರ ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಸರಕಾರ ಹೊರಡಿಸಿರುವ ಹಲವು ಆದೇಶಗಳ ಪ್ರಕಾರ, ಮೋಟಾರ್ ಬೈಕ್ ಅನ್ನು ಯಾರಾದರೊಬ್ಬ ಪ್ರಯಾಣಿಕರನ್ನು ಕರೆದೊಯ್ಯಲು ಬಳಸಬಹುದು. ಕೇಂದ್ರ ಸರಕಾರದ ಆದೇಶದಂತೆ ಬೈಕ್ ಕಾಂಟ್ರ್ಯಾಕ್ಟ್ ಕ್ಯಾರೇಜ್ ಆಗಿ ಬಳಸಬಹುದು. ಕಾಂಟ್ರ್ಯಾಕ್ಟ್ ಕ್ಯಾರೇಜ್‍ನಲ್ಲಿ ಮೋಟಾರ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಮೋಟಾರ್ ಕ್ಯಾಬ್ ಎಲ್ಲವೂ ಸೇರಿವೆ. ಅದರಂತೆ ಈಗಿರುವ ಕಾನೂನಿನ ಅಡಿಯಲ್ಲಿಯೇ ಅರ್ಜಿಯನ್ನು ಪರಿಶೀಲಿಸಲು ಅವಕಾಶವಿದ್ದು, ಆ ಪ್ರಕಾರ ಸರಕಾರ ಅರ್ಜಿದಾರರ ಮನವಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿದೆ.
ಅರ್ಜಿದಾರರ ಮನವಿ ಏನು: ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 2(7) ಅಡಿ ಗುತ್ತಿಗೆ ಸಾರಿಗೆ (ಕಂಟ್ರ್ಯಾಕ್ಟ್ ಕ್ಯಾರೇಜ್) ವ್ಯಾಖ್ಯಾನವಿದ್ದು, ಅದರಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಾರಿಗೆ ವಾಹನಗಳನ್ನು ಅಂದರೆ ಗುತ್ತಿಗೆ ವಾಹನ ಸೇರಿ ಎಲ್ಲ ವಾಹನಗಳ ನಿಯಂತ್ರಿಸುವ ಅಧಿಕಾರವಿದೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 73ರ ಪ್ರಕಾರ, ಕ್ಯಾರೇಜ್ ಪರ್ಮಿಟ್ ನೀಡಲು ಅವಕಾಶವಿದೆ. ಸೆಕ್ಷನ್ 74ರಲ್ಲಿ ಪರ್ಮಿಟ್ ನೀಡುವಾಗ ಯಾವ ಷರತ್ತುಗಳನ್ನು ವಿಧಿಸಬಹುದು, ಯಾವ ಷರತ್ತುಗಳಿಂದ ವಿನಾಯಿತಿ ನೀಡಬಹುದು ಎಂಬುದಕ್ಕೂ ಸಹ ಅವಕಾಶವಿದೆ. ಅದರಂತೆ, ಮೋಟಾರ್ ಸೈಕಲ್ ಟ್ಯಾಕ್ಸಿಯನ್ನು ಸಾರಿಗೆ ವಾಹನ ಎಂದು ಓಡಿಸಲು 2004ರ ನವೆಂಬರ್ 5ರ ಅಧಿಸೂಚನೆಯಂತೆ ಅನುಮತಿ ನೀಡಬೇಕು.
ನಗರ ಸಂಚಾರವನ್ನು ಉತ್ತೇಜಿಸಲು ರಚಿಸಲಾಗಿದ್ದ ತಜ್ಞರ ಸಮಿತಿ 2016ರ ಡಿಸೆಂಬರ್ 12ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉದ್ದೇಶಿತ ಟ್ಯಾಕ್ಸಿ ನೀತಿ ಮಾರ್ಗಸೂಚಿಯನ್ನು ನೀಡಿದೆ. ಹೀಗಾಗಿ, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಅವಕಾಶ ಮಾಡಿಕೊಡುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.
ಸರಕಾರದ ಪರ ವಕೀಲರು ವಾದ ಮಂಡಿಸಿ, ಸದ್ಯ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವಂತಹ ಯಾವುದೇ ನೀತಿ ರಾಜ್ಯದಲ್ಲಿ ಇಲ್ಲ. ಮೋಟಾರು ವಾಹನ ಕಾಯ್ದೆಯಲ್ಲಿ ಅದಕ್ಕೆ ಅವಕಾಶ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಲಯ ನಿರ್ದೇಶನ ನೀಡಿದರೆ ಅರ್ಜಿಯನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.







