ಕೊರೋನ ಸೋಂಕು ಹರಡುವ ಕೇಂದ್ರ ಆಗುತ್ತಿರುವ ಉಡುಪಿ ಲಸಿಕಾ ಕೇಂದ್ರ : ಆರೋಪ
135 ಡೋಸ್ಗಾಗಿ ಸುರಕ್ಷಿತ ಅಂತರ ಇಲ್ಲದೆ ನೂಕು ನುಗ್ಗಲು !

ಸಾಂದರ್ಭಿಕ ಚಿತ್ರ
ಉಡುಪಿ, ಮೇ 10: ಕೊರೋನ ಸೋಂಕು ವ್ಯಾಪಾಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೊದಲ ಡೋಸ್ ಪಡೆದು ಅವಧಿ ಮೀರಿದವರು ಎರಡನೇ ಡೋಸ್ ಪಡೆಯಲು ಉಡುಪಿ ಸೈಂಟ್ ಸಿಸಿಲಿಸ್ ಲಸಿಕಾ ಕೇಂದ್ರದಲ್ಲಿ ಮುಗಿ ಬೀಳುತ್ತಿದ್ದಾರೆ. ಇಲ್ಲಿ ಯಾವುದೇ ಸುರಕ್ಷಿತ ಅಂತರ ಕಾಪಾಡದ ಪರಿಣಾಮ ಲಸಿಕಾ ಕೇಂದ್ರಗಳೇ ಸೋಂಕು ಹರಡುವ ತಾಣವಾಗುವ ಭೀತಿ ಕಾಡುತ್ತಿದೆ ಎಂದು ಆರೋಪ ಕೇಳಿಬಂದಿದೆ.
ಇಂದು ಕೇವಲ 130 ಕೋವ್ಯಾಕ್ಸಿನ್ ಡೋಸ್ ಬಂದಿದ್ದರೂ ಅದನ್ನು ಪಡೆಯಲು ಬೆಳಗಿನ ಜಾವ 5ಗಂಟೆಯಿಂದ ಸುಮಾರು ಒಂದು ಸಾವಿರ ಮಂದಿ ಕೇಂದ್ರದಲ್ಲಿ ಜಮಾಯಿಸಿದ್ದರು. ಕೋವ್ಯಾಕ್ಸಿನ್ ಮಾತ್ರವಲ್ಲದೆ ಕೋವಿಶೀಲ್ಡ್ ಪಡೆದವರು ಕೂಡ ಎರಡನೇ ಡೋಸ್ಗಾಗಿ ಇಲ್ಲಿ ಕಾಯುತ್ತಿದ್ದರು. ಇದಕ್ಕೆಲ್ಲ ಸಮಪರ್ಕ ಮಾಹಿತಿ ಕೊರತೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಅದೇ ರೀತಿ ಮೊದಲ ಡೋಸ್ ಪಡೆಯುವವರು ಕೂಡ ಇಲ್ಲಿ ಆಗಮಿಸಿದ್ದರು. ಹೀಗೆ ಜನಸ್ತೋಮವೇ ಸೇರಿರುವುದರಿಂದ ಎಲ್ಲೂ ಸುರಕ್ಷಿತ ಅಂತರ ಎಂಬುದು ಇರಲಿಲ್ಲ. ಜನ ಗುಂಪುಗುಂಪಾಗಿ ನಿಂತು ಟೋಕನ್ಗಾಗಿ ಕಾಯುತ್ತಿರುವುದು ಕಂಡು ಬಂತು. ಲಸಿಕೆ ಪಡೆಯಲು ಟೋಕನ್ಗಾಗಿ ಹತೋರೆಯುತ್ತಿದ್ದ ಜನರನ್ನು ಪೊಲೀಸರು ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಡೋಸ್ನೊಂದಿಗೆ ಆಗಮಿಸಿದ ಸಿಬ್ಬಂದಿಗಳು, ಕೇವಲ 130 ಡೋಸ್ ಮಾತ್ರ ಇರುವುದು. ಅದು ಕೂಡ ಕೋವ್ಯಾಕ್ಸಿನ್ ಎಂದು ಅಲ್ಲಿ ನೆರೆದವರಿಗೆ ಮಾಹಿತಿ ನೀಡಿದರು. ಅಲ್ಲಿಯವರೆಗೆ ಲಸಿಕೆಗಾಗಿ ಬಿಸಿಲಿನಲ್ಲಿ ನಿಂತು ಕಾಯುತ್ತಿದ್ದ ಹಿರಿಯ ನಾಗರಿಕರು, ಮಹಿಳೆಯರು ನಿರಾಸೆಗೆ ಒಳಗಾದರು.
ಈ ಮಧ್ಯೆ ಕೇಂದ್ರದೊಳಗೆ ಪ್ರವೇಶಿಸಲು ಜನ ನೂಕುನುಗ್ಗಲು ಆರಂಭಿಸಿದರು. ಸೆಕ್ಯುರಿಟಿ ಗಾರ್ಡ್, ಪೊಲೀಸರು ಹಾಗೂ ಸ್ವಯಂ ಸೇವಕರು ಇವರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಇದೇ ವೇಳೆ ಹಿರಿಯ ನಾಗರಿಕರು ಗದ್ದಲ ಉಂಟು ಮಾಡಿದರು. ಸರಕಾರ, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರಿಯಾದ ವ್ಯವಸ್ಥೆ ಹಾಗೂ ಮಾಹಿತಿ ನೀಡದ ಜಿಲ್ಲಾಡಳಿತದ ವಿರುದ್ಧ ಹಿಡಿಶಾಪ ಹಾಕಿದರು. ಉಪಹಾರ ಸೇವಿಸದೆ ಬೆಳಗ್ಗೆಯಿಂದ ಕಾದು ಕುಳಿತಿದ್ದ ಬಹಳಷ್ಟು ಮಂದಿ ಲಸಿಕೆ ದೊರೆಯದೆ ನಿರಾಸೆಯಿಂದ ವಾಪಾಸ್ಸಾದರು.
ಟೋಕನ್ಗಾಗಿ ಜನ ಯಾವುದೇ ಸುರಕ್ಷಿತ ಅಂತರ ಕಾಪಾಡದೆ ಮುಗಿ ಬೀಳುತ್ತಿರುವುದು ಕಂಡುಬಂತು. ಕೆಲವು ಹಿರಿಯ ನಾಗರಿಕರು ಲಸಿಕೆ ಸಿಗದಿದ್ದರೂ ಪರವಾಗಿಲ್ಲ, ಕೊರೋನ ಸೋಂಕು ಹರಡುವುದನ್ನು ತಪ್ಪಿಸಲು ಜನ ಸಂದಣಿಯಿಂದ ದೂರ ಉಳಿದುಕೊಂಡಿದ್ದರು.
''ಇಲ್ಲಿ ಲಸಿಕೆ ಪಡೆಯಲು ಸಾವಿರಕ್ಕೂ ಅಧಿಕ ಮಂದಿ ಸೇರಿದ್ದಾರೆ. ಯಾವ ಲಸಿಕೆ ಇದೆ ಎಂಬುದರ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಕಳೆದ ನಾಲ್ಕು ದಿನಗಳಿಂದ ನಾನು ಬರುತ್ತಿದ್ದೇನೆ. ಪ್ರತಿ ಬಾರಿಯೂ ನಾಳೆ ಬನ್ನಿ ಎಂಬ ಉತ್ತರ ದೊರೆಯುತ್ತಿದೆ. ಟೋಕನ್ ಕೊಡುವ ಕಾರ್ಯ ಕೂಡ ವಿಳಂಬವಾಗಿ ನಡೆ ಯುತ್ತದೆ. ಒಟ್ಟಾರೆ ಈ ಲಸಿಕಾ ಕೇಂದ್ರವು ಅವ್ಯವಸ್ಥೆಯ ಆಗರವಾಗಿದೆ. ಆದುದರಿಂದ ಸರಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ವ್ಯವಸ್ಥೆ ಮಾಡಬೇಕು.
-ಶೇಖರ್ ಶೆಟ್ಟಿ, ಇಂದ್ರಾಳಿ
''ಟೋಕನ್ನಲ್ಲಿ ರಾಜಕೀಯ ಪ್ರಭಾವ !''
ಜಿಲ್ಲಾಸ್ಪತ್ರೆಯ ಲಸಿಕಾ ಕೇಂದ್ರ ಆಗಿರುವ ಸೈಂಟ್ ಸಿಸಿಲೀಸ್ನಲ್ಲಿ ಲಸಿಕೆಗಾಗಿ ಪಡೆಯಲು ಟೋಕನ್ನಲ್ಲಿ ರಾಜಕೀಯ ಪ್ರಭಾವ ಕಂಡುಬರುತ್ತಿದ್ದು, ಇದರಿಂದ ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆದ ಸಾಮಾನ್ಯ ಜನರು ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಲಸಿಕಾ ಕೇಂದ್ರದಲ್ಲಿ ಬಿಡುಬಿಟ್ಟಿರುವ ಸ್ಥಳೀಯ ಜನಪ್ರತಿನಿಧಿಗಳು, ತಮ್ಮ ವಾರ್ಡ್ಗಳ ಜನರಿಗೆ ಮತ್ತು ಪ್ರಭಾವಿ ವ್ಯಕ್ತಿಗಳನ್ನು ಯಾವುದೇ ಟೋಕನ್ ಪಡೆಯದೆ ನೇರವಾಗಿ ಕೇಂದ್ರದೊಳಗೆ ಕರೆದುಕೊಂಡು ಹೋಗಿ ಡೋಸ್ ಹಾಕಿಸಿ ಕೊಳ್ಳುತ್ತಿದ್ದಾರೆ ಎಂದು ದೂರಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವ ಘಟನೆಗಳು ಕೂಡ ಕೇಂದ್ರದಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.
ನಾನು ಲಸಿಕಾ ಕೇಂದ್ರಕ್ಕೆ ಬೆಳಗ್ಗೆ 9ಗಂಟೆ ಆಗಮಿಸಿ ಟೋಕನ್ ತೆಗೆದು ಕೊಂಡಿದ್ದೆ. ಒಟ್ಟು 100 ಟೋಕನ್ಗಳ ಪೈಕಿ ನನ್ನದ್ದು 58ನೇ ಟೋಕನ್ ಆಗಿತ್ತು. ನಾನು ಸರತಿ ಸಾಲಿನಲ್ಲಿ ನಿಂತಿದ್ದೇನೆ. ಆದರೆ ಮಧ್ಯಾಹ್ನ 1.45ಕ್ಕೆ ಎಲ್ಲ ಲಸಿಕೆ ಮುಗಿತು ಎಂದು ಸಿಬ್ಬಂದಿಗಳು ತಿಳಿಸಿದರು. ಈ ಮಧ್ಯೆ ಹಲವು ಮಂದಿ ಬಂದು ಲಸಿಕೆ ತೆಗೆದುಕೊಂಡು ಹೋಗಿದ್ದಾರೆ. ಹೀಗೆ ಮಾಡಿದರೆ ಗ್ರಾಮೀಣ ಪ್ರದೇಶಗಳಿಂದ ಬರುವ ನಮ್ಮನ್ನು ಯಾರು ಕೇಳುತ್ತಾರೆ ಎಂದು ಕೆಮ್ಮಣ್ಣು ಮುದಲಕಟ್ಟ, ನಿವಾಸಿ ಆನಂದ ಪೂಜಾರಿ ಪ್ರಶ್ನಿಸಿದ್ದಾರೆ.







