ನೆರವು ನೀಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ದೌರ್ಜನ್ಯಕ್ಕೆ ಇಳಿದ ಸರಕಾರ: ಕಾಂಗ್ರೆಸ್

ಬೆಂಗಳೂರು, ಮೇ 10: ಜನತೆ ಮೊದಲೆ ನೊಂದಿದ್ದಾರೆ. ಅವರಿಗೆ ಜೀವದಷ್ಟೇ ಜೀವನವೂ ಮುಖ್ಯ, ಬದುಕು ಸಾಗಿಸುವಲ್ಲಿ ಬಸವಳಿದಿದ್ದಾರೆ. ಲಾಕ್‍ಡೌನ್ ಹೆಸರಲ್ಲಿ ಜನತೆಯ ಮೇಲಿನ ಪೊಲೀಸ್ ದೌರ್ಜನ್ಯ ನಿಲ್ಲಿಸಬೇಕು. ಲಾಠಿಗಳಿಂದ ಕೊರೋನ ಓಡಿಸಲಾಗದು. ಜನತೆಗೆ ನೆರವು ನೀಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಸರಕಾರ ದೌರ್ಜನ್ಯಕ್ಕೆ ಇಳಿದಿದೆ. ಲಾಠಿ ದೌರ್ಜನ್ಯ ನಿಲ್ಲಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ಪೊಲೀಸರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆ ಹೊರತು ದೌರ್ಜನ್ಯಕ್ಕೆ ಇಳಿಯಬಾರದು. ಕಳೆದ ವರ್ಷದ ಲಾಕ್‍ಡೌನ್ ಮಾಡಿದ ಹಾನಿಯಿಂದ ಇನ್ನೂ ಸುಧಾರಿಸಿಕೊಂಡಿಲ್ಲ, ಅದಲ್ಲದೆ ಕಳೆದ 15 ದಿನದಿಂದ ಅಘೋಷಿತ ಲಾಕ್‍ಡೌನ್‍ನಿಂದ ಮತ್ತಷ್ಟು ಜರ್ಜರಿತರಾಗಿದ್ದಾರೆ. ಈ ಹೊತ್ತಿನಲ್ಲಿ ಪೊಲೀಸರು ಸಂಯಮದಿಂದ ವರ್ತಿಸದೆ ಹೋದರೆ ಜನತೆ ದಂಗೆ ಏಳುವ ಸಂಭವವಿದೆ ಎಂದು ತಿಳಿಸಿದೆ.
ಬೋನಿನೊಳಗೆ ಕೂಡಿಟ್ಟ ಪ್ರಾಣಿಗಳಿಗೇ ಆಹಾರ ಒದಗಿಸಲಾಗುತ್ತದೆ. ಆದರೆ ಈ ಸರಕಾರ "ಜನತೆ ಬೋನಿನೊಳಗೆ ಇರಬೇಕು ಆದರೆ ಆಹಾರ ಮಾತ್ರ ನೀಡಲಾರೆವು" ಎನ್ನುತ್ತಿದೆ. ಯಾವುದೇ ನೆರವನ್ನೂ ನೀಡದ ಸರಕಾರ ಜನತೆಯನ್ನು ಕೂಡಿಹಾಕಿ ಪೊಲೀಸರ ಕೈಗೆ ಲಾಠಿ ಕೊಟ್ಟರೆ ಜನರನ್ನು ಕಪಾಡಿದಂತಾಗದು ಎಂದು ಕಾಂಗ್ರೆಸ್ ಹೇಳಿದೆ.
ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರಕ್ಕಿಂತಲೂ ಜನತೆ ಹೆಚ್ಚು ಜವಾಬ್ದಾರಿಯುತವಾಗಿದ್ದಾರೆ, ಸರಕಾರಕ್ಕಿಂತಲೂ ಮುಂಜಾಗ್ರತೆಯ ಜಾಗೃತಿ ಜನತೆಗಿದೆ. ಜನರು ಬದುಕಿನ ಅನಿವಾರ್ಯತೆಗೆ ಹೊರತು ಆಟವಾಡಲು ರಸ್ತೆಗೆ ಬರುತ್ತಿಲ್ಲ. ಸರಕಾರ ಪೊಲೀಸ್ ದೌರ್ಜನ್ಯ ನಿಲ್ಲಿಸಿ, ರೇಷನ್ ಕಿಟ್‍ಗಳನ್ನು ಮನೆ ಬಾಗಿಲಿಗೆ ಒದಗಿಸಲಿ. ಅಗತ್ಯ ನೆರವು ಘೋಷಿಸಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಲಸಿಕೆ ನೀಡುವಿಕೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ವಿಫಲಗೊಂಡಿವೆ. 18 ವರ್ಷ ಮೇಲ್ಪಟ್ಟವರಿಗೆ ನೋಂದಣಿ ರದ್ದುಗೊಳಿಸಿದ ಸರಕಾರ ಈಗ ನೋಂದಾಯಿಸಿದವರಿಗೆ ಮಾತ್ರ ಲಸಿಕೆ ಎನ್ನುತ್ತಿದೆ. ಲಸಿಕೆ ಬಗ್ಗೆ ಪ್ರಚಾರದ ಅಬ್ಬರ ನಡೆಸುತ್ತಿದ್ದ ಆರೋಗ್ಯ ಸಚಿವ ಸುಧಾಕರ್, ರಾಜ್ಯ ಬಿಜೆಪಿ ಇಂತಹ ಅಧೋಗತಿ ಏಕೆ ಬಂತು? ಇಂತಹ ವೈಫಲ್ಯತೆಗೆ ನಿಮಗೇಕೆ ಆಡಳಿತ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.







