ಕೊರೋನ ಪ್ರಸಾರ ತಡೆಯಲು ಎವರೆಸ್ಟ್ ನಲ್ಲಿ ಚೀನಾದಿಂದ ಪ್ರತ್ಯೇಕತಾ ರೇಖೆ: ಸರಕಾರಿ ಮಾಧ್ಯಮ ವರದಿ

ಬೀಜಿಂಗ್ (ಚೀನಾ), ಮೇ 10: ಕೊರೋನ ವೈರಸ್ ಪೀಡಿತ ನೇಪಾಳದಿಂದ ಬರುವ ಪರ್ವತಾರೋಹಿಗಳಿಂದ ಸಾಂಕ್ರಾಮಿಕದ ಸಂಭಾವ್ಯ ಹರಡುವಿಕೆಯನ್ನು ತಪ್ಪಿಸುವುದಕ್ಕಾಗಿ ಚೀನಾವು ಮೌಂಟ್ ಎವರೆಸ್ಟ್ ಶಿಖರದ ತುದಿಯಲ್ಲಿ ಪ್ರತ್ಯೇಕತಾ ರೇಖೆಯೊಂದನ್ನು ಸ್ಥಾಪಿಸಲಿದೆ ಎಂದು ಚೀನಾದ ಸರಕಾರಿ ಮಾಧ್ಯಮವೊಂದು ವರದಿ ಮಾಡಿದೆ.
ಮೌಂಟ್ ಎವರೆಸ್ಟ್ನ ಮೂಲಶಿಬಿರದಲ್ಲಿ ಹಲವಾರು ಮಂದಿ ಕಾಯಿಲೆಪೀಡಿತರಾಗಿರುವ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ.
ಕೋವಿಡ್-19 ಸಾಂಕ್ರಾಮಿಕವು 2019ರ ಕೊನೆಯಲ್ಲಿ ಚೀನಾದಲ್ಲಿ ಮೊದಲು ಕಾಣಿಸಿಕೊಂಡಿತಾದರೂ, ಕಟ್ಟುನಿಟ್ಟಿನ ಲಾಕ್ಡೌನ್ಗಳು ಮತ್ತು ಗಡಿ ಮುಚ್ಚಳದಂಥ ಕಠಿಣ ಕ್ರಮಗಳ ಮೂಲಕ ಸಾಂಕ್ರಾಮಿಕವನ್ನು ಬಹುತೇಕ ನಿಯಂತ್ರಣಕ್ಕೆ ತರುವಲ್ಲಿ ಅದು ಯಶಸ್ವಿಯಾಗಿದೆ.
ಇತ್ತೀಚಿನ ವಾರಗಳಲ್ಲಿ ಜಗತ್ತಿನ ಅತ್ಯುನ್ನತ ಶಿಖರದ ನೇಪಾಳಿ ಭಾಗದಲ್ಲಿರುವ ಮೂಲ ಶಿಬಿರದಿಂದ 30ಕ್ಕೂ ಅಧಿಕ ರೋಗಪೀಡಿತ ಪರ್ವತಾರೋಹಿಗಳನ್ನು ತೆರವುಗೊಳಿಸಲಾಗಿತ್ತು. ಹಾಗಾಗಿ, ಸಾಂಕ್ರಾಮಿಕವು ಈ ವರ್ಷದ ಪರ್ವತಾರೋಹಣ ಋತುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಭೀತಿ ಎದುರಾಗಿದೆ. ನೇಪಾಳ ಕೊರೋನ ವೈರಸ್ ಎರಡನೇ ಅಲೆಯ ತೀವ್ರ ಹೊಡೆತಕ್ಕೆ ಗುರಿಯಾಗಿದೆ.





