ಸಂಪೂರ್ಣ ಲಾಕ್‌ಡೌನ್ : ಉಡುಪಿ ಜಿಲ್ಲೆಯಾದ್ಯಂತ ಪೊಲೀಸ್ ಕಟ್ಟೆಚ್ಚರ
ನಿಯಮ ಉಲ್ಲಂಘಿಸಿದ 109 ವಾಹನಗಳು ವಶ: 14 ಪ್ರಕರಣ ದಾಖಲು

ಉಡುಪಿ, ಮೇ 10: ಇಂದಿನಿಂದ ಜಾರಿಯಾಗಿರುವ ಸಂಪೂರ್ಣ ಲಾಕ್ ಡೌನ್‌ನಲ್ಲಿ ಅಗತ್ಯವಸ್ತುಗಳ ಖರೀದಿಗೆ ವಾಹನ ಬಳಕೆಗೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಅನಗತ್ಯವಾಗಿ ಓಡಾಟ ನಡೆಸಿದ ಒಟ್ಟು 109 ವಾಹನ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ 14 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ತುರ್ತು ಕಾರಣ ಹೊರತು ಪಡಿಸಿ ಉಳಿದವುಗಳಿಗೆ ವಾಹನ ಬಳಕೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಬೆಳಗ್ಗೆ ವಾಹನಗಳ ಸಂಚಾರ ಸಾಮಾನ್ಯವಾಗಿ ಕಂಡುಬಂತು. ಜಿಲ್ಲೆಯ ಗಡಿ ಭಾಗ ಸಹಿತ ಒಟ್ಟು 32 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ವಾಹನ ತಪಾಸಣೆ ನಡೆಸಲಾ ಯಿತು. ಕಾಪು, ಕುಂದಾ ಪುರ, ಕೋಟ, ಬೈಂದೂರು, ಹೆಬ್ರಿ, ಮಲ್ಪೆ, ಕಾರ್ಕಳ, ಶಿರ್ವ, ಪಡುಬಿದ್ರೆಗಳಲ್ಲೂ ಪೊಲೀಸರು ತಪಾಸಣೆ ಕಾರ್ಯ ನಡೆಸಿದರು.
ಉಡುಪಿ ನಗರದ ಕಲ್ಸಂಕ, ಶಿರಿಬೀಡು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಚೆಕ್‌ಪೋಸ್ಟ್ ನಿರ್ಮಿಸಿ ವಾಹನ ತಾಪಸಣೆ ನಡೆಸಲಾಯಿತು. ಇಲ್ಲಿ ಕಾರಣ ಇಲ್ಲದೆ ಸಂಚರಿಸಿದ ಎರಡು ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅದೇ ರೀತಿ 44 ಪ್ರಕರಣಗಳನ್ನು ದಾಖಲಿಸಿ 28 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಕಲ್ಸಂಕ ಚೆಕ್‌ಪೋಸ್ಟ್‌ನಲ್ಲಿ ಹಾಗೂ ಅಪರ ಜಿಲ್ಲಾಧಿಕಾರಿ ಶಿರಿಬೀಡು ಚೆಕ್‌ಪೋಸ್ಟ್‌ನಲ್ಲಿ ಪರಿಶೀಲನೆ ನಡೆಸಿದರು. ಬ್ರಹ್ಮಾವರದಿಂದ ಉಡುಪಿಗೆ ಕಾರಣ ಇಲ್ಲದೆ ಆಗಮಿಸಿದ ಬೈಕ್ ಸವಾರ ವಿರುದ್ಧ ಎಪಿಡಾಮಿಕ್ ಕಾಯಿದೆಯಡಿ ಪ್ರಕರಣ ದಾಖಲಿಸಿ ಬೈಕ್ ವಶಪಡಿಸಿಕೊಳ್ಳಲಾಗಿದೆ.
ವಾಹನ ಸಂಚಾರಕ್ಕೆ ನಿರ್ಬಂಧಿ ವಿಧಿಸಿರುವುದರಿಂದ ತರಕಾರಿ, ದಿನಸಿ ಅಂಗಡಿ ಗಳಲ್ಲಿ ವ್ಯಾಪಾರ ಕುಸಿತವಾಗಿದೆ. ಹೊಟೇಲಿನಲ್ಲಿ ರಾತ್ರಿ 9ಗಂಟೆಯವರೆಗೆ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10ಗಂಟೆಯ ನಂತರ ನಗರದ ಎಲ್ಲ ರಸ್ತೆಗಳು ಬೀಕೋ ಎನ್ನುತ್ತಿದ್ದವು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಗತ್ಯ ವಸ್ತುಗಳ ವಾಹನ ಓಡಾಟ ಮಾತ್ರ ಕಂಡುಬಂದವು.
ಕುಂದಾಪುರ ಪೇಟೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅನಗತ್ಯ ಓಡಾಟ ನಡೆಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. ಅಲ್ಲದೆ ಅಂಗಡಿ- ಮುಂಗಟ್ಟು ಹಾಗೂ ಮೀನು ಮಾರುಕಟ್ಟೆಗಳನ್ನು 10ಗಂಟೆಗೆ ಬಂದ್ ಮಾಡಿಸ ಲಾಯಿತು. ಕುಂದಾಪುರ ಡಿವೈಎಸ್ಪಿಶ್ರೀಕಾಂತ್ ಹಾಗೂ ಎಸ್ಸೈ ಸದಾಶಿವ ಗವರೋಜಿ, ಸಂಚಾರ ಎಸ್ಸೈ ಸುದರ್ಶನ್ ಅವರ ನೇತೃತ್ವದಲ್ಲಿ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಉಡುಪಿ ಜಿಲ್ಲೆಯಾದ್ಯಂತ ಸ್ಥಾಪಿಸಿರುವ 32 ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯ ನಡೆಸಲಾಗಿದೆ. ಅನಗತ್ಯವಾಗಿ ಓಡಾಟ ನಡೆಸಿದ 95 ದ್ವಿಚಕ್ರ ವಾಹನ, ಮೂರು ತ್ರಿ ಚಕ್ರ ವಾಹನ, 12 ಕಾರುಗಳು, ಏಳು ಘನ ವಾಹನಗಳು ಸೇರಿದಂತೆ ಒಟ್ಟು 109 ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿರುವ ಬಗ್ಗೆ ಉಡುಪಿ-4, ಕಾರ್ಕಳ-4, ಕುಂದಾಪುರದಲ್ಲಿ 6 ಪ್ರಕರಣ ಗಳನ್ನು ದಾಖಲಿಸಿಕೊಳ್ಳಲಾಗಿದೆ.
-ವಿಷ್ಣುವರ್ಧನ್, ಎಸ್ಪಿ ಉಡುಪಿ
ಕೋಟದಲ್ಲೂ ಗ್ರಾಮೀಣ ಮಹಿಳೆಯರ ಪರದಾಟ: ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನ 1ರವರೆಗೆ ಕೋಟ ಹೋಬಳಿಯಲ್ಲಿ ಪಡಿತರ ಸಾಮಾಗ್ರಿಗಳನ್ನು ನೀಡುತ್ತಿದ್ದು ಅದನ್ನು ಪಡೆದು ಕೊಂಡವರು ವಾಹನ ಇಲ್ಲದೆ ಮನೆಗೆ ತೆಗೆದುಕೊಂಡು ಹೋಗಲು ಪರದಾಡುತ್ತಿರುವ ದೃಶ್ಯ ಕಂಡುಬಂತು.
ವೃದ್ದರು, ಮಹಿಳೆಯರು, ಅಂಗವಿಕಲರು, ಮಕ್ಕಳು, ಅನಾರೋಗ್ಯ ಪೀಡಿತರು ಬೆಳಿಗ್ಗೆಯಿಂದ ಪಡಿತರ ಸಾಮಾಗ್ರಿಗಳನ್ನು ಪಡೆದು ಒಂದರಿಂದ ಎರಡು ಕಿಲೋ ಮೀಟರ್ ದೂರ ತಲೆ ಮೇಲೆ ಹೊತ್ತುಕೊಂಡು ಹೋಗುವಂತಾಯಿತು. ಇವರ ಕಷ್ಟ ನೋಡಲಾಗದೆ ಕೋಟ ಸಹಕಾರಿ ವ್ಯವಸಾಯಕ ಸಂಘದ ಮನವಿಯಂತೆ ಕೋಟ ಗ್ರಾಪಂ, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಗೂಡ್ಸ್ ರಿಕ್ಷಾಗಳ ವ್ಯವಸ್ಥೆಯನ್ನು ಮಾಡಲಾಯಿತು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಡಿತರ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಸಮಾಗ್ರಿಗಳನ್ನು ಪಡೆದವರು ಹೊತ್ತುಕೊಂಡು ಹೋಗಲು ಸಾಧ್ಯವಾಗದೆ ಸರಕಾರಕ್ಕೆ ಹಿಡಿಶಾಪ ಹಾಕುವುದು ಕಂಡುಬಂತು.







