ಕೊರೋನದಲ್ಲಿ ರಾಜಕೀಯ ಮಾಡದೆ ತಕ್ಷಣ ಸರ್ವಪಕ್ಷಗಳ ಸಭೆ ಕರೆಯಿರಿ: ಸೊರಕೆ

ಉಡುಪಿ, ಮೇ 10: ಕೊರೋನ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಉಡುಪಿ ಜಿಲ್ಲಾಡಳಿತ ಕೊರೋನಾ ನಿಯಂತ್ರಣದ ವಿಚಾರದಲ್ಲಿ ಪಕ್ಷ ರಾಜಕೀಯ ಮಾಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಕ್ಷಣವೇ ಸರ್ವ ಪಕ್ಷಗಳ ಸಭೆಯನ್ನು ಕರೆಯಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ಕೇವಲ ಶೇ.2 ಮಂದಿಗೆ ಮಾತ್ರ ಲಸಿಕೆ ನೀಡುವ ಕೆಲಸ ಮಾಡಲಾಗಿದೆ. ಲಸಿಕೆ, ಆಕ್ಸಿಜನ್, ವೆಂಟಿಲೇಟರ್ ಬೆಡ್, ವೈದ್ಯರ ಕೊರತೆ ಬಗ್ಗೆ ಸರಕಾರ ಗಮನ ಕೊಡುತ್ತಿಲ್ಲ. ಕೇಂದ್ರ ಸರಕಾರ ತಮ್ಮ ಹೊಣೆಗಾರಿಕೆಯಿಂದ ದೂರ ಸರಿದು ರಾಜ್ಯಗಳ ಮೇಲೆ ಜವಾಬ್ದಾರಿ ವಹಿಸಿದೆ ಎಂದು ದೂರಿದರು.
ಕೊರೋನ ವಿಚಾರದಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೊರಿಸಿದರೂ ರಾಜ್ಯ ಸಂಸದರೂ ತುಟಿ ಬಿಚ್ಚುತ್ತಿಲ್ಲ. ಕೊರೋನಾ ಸಾವಿನ ಲೆಕ್ಕ ಚಾರವನ್ನು ಸರಿಯಾಗಿ ನೀಡುತ್ತಿಲ್ಲ. ವಾರ್ ರೂಮ್‌ನಲ್ಲಿ ಕೋಮು ವಿಚಾರ ವನ್ನು ಎತ್ತಿ ಸರಕಾರದ ಲೋಪದೋಷಗಳನ್ನು ಮರೆ ಮಾಚುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಜಿಲ್ಲೆಯ ಉಸ್ತುವಾರಿ ಸಚಿವರು ಕೊರೋನಾ ನಿಯಂತ್ರಣಕ್ಕೆ ಯಾವುದೇ ಪೂರ್ವ ಸಿದ್ಧತೆ ಮಾಡಿಲ್ಲ. ಸರ್ವ ಪಕ್ಷಗಳ ಸಭೆ ಕರೆಯುವ ಇಚ್ಛೆ ಕೂಡ ಇವರಿಗೆ ಇಲ್ಲ. ನಮ್ಮ ಆಡಳಿತ ವ್ಯವಸ್ಥೆ ಕೊರೋನಾ ನಿಯಂತ್ರಿಸುವ ಬೇಕೆಂಬ ಇಚ್ಛಾಶಕ್ತಿ ಕೂಡ ಇಲ್ಲವಾಗಿದೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಜಿಲ್ಲಾದ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಕೊರೊನಾ ಒಂದನೇ ಅಲೆಯಿಂದ ಪಾಠ ಕಲಿತರೂ, ಎರಡನೆ ಅಲೆಗೆ ಜಿಲ್ಲಾಡಳಿತ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಲಸಿಕೆ ನೀಡುವ ಕಾರ್ಯ ವನ್ನು ಕೂಡ ಶಿಸ್ತುಬಧ್ಧವಾಗಿ ಮಾಡಿಲ್ಲ. ಆಕ್ಸಿಜನ್ ಕೃತಕ ಅಭಾವ ವನ್ನು ಸೃಷ್ಟಿಸ ಲಾಗಿದೆ. ಒಟ್ಟಾರೆಯಾಗಿ ಕೊರೋನಾ ಅಲೆಯನ್ನು ಎದುರಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವೆರೋನಿಕ ಕರ್ನೇಲಿಯೋ, ಸಂಕಪ್ಪ, ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ, ಹರೀಶ್ ಶೆಟ್ಟಿ ಪಾಂಗಳ, ಭಾಸ್ಕರ್ ರಾವ್ ಕಿದಿಯೂರು, ಸೌರಭ್ ಬಲ್ಲಾಳ್ ಉಪಸ್ಥಿತರಿದ್ದರು.







