ಶರಣ್ ಪಂಪ್‌ವೆಲ್ ಹೇಳಿಕೆಗೆ ಜೆಡಿಎಸ್ ಮುಖಂಡ ಅಕ್ಷಿತ್ ಸುವರ್ಣ ಖಂಡನೆ
ಮಂಗಳೂರು, ಮೇ 10: ಕೊರೋನದಿಂದ ಮೃತರಾದ ಹಿಂದೂಗಳ ಶವಗಳನ್ನು ಸಂಸ್ಕಾರ ಮಾಡಲು ಮುಸ್ಲಿಂ ಸಮುದಾಯದ ಸ್ವಯಂ ಸೇವಾ ಸಂಘಟನೆಗಳಿಗೆ ನೀಡದಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ನಾಯಕ ಶರಣ್ ಪಂಪ್‌ವೆಲ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಕೃತ್ಯವನ್ನು ದ.ಕ. ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಖಂಡಿಸಿದ್ದಾರೆ.
ಇದು ಶರಣ್ ಪಂಪ್‌ವೆಲ್‌ರ ಕೀಳುಮನಸ್ಥಿತಿಯನ್ನು ಎತ್ತಿತೋರಿಸುತ್ತದೆ. ಹಿಂದೂ ಧರ್ಮವನ್ನು ಯಾರೂ ಯಾರಿಗೂ ಗುತ್ತಿಗೆ ನೀಡಿಲ್ಲ ಎನ್ನುವು ದನ್ನು ಶರಣ್ ಅರ್ಥ ಮಾಡಿಕೊಳ್ಳಬೇಕು.ವಿಶ್ವವೇ ಕೊರೋನದಂತಹ ಮಹಾಮಾರಿಯಿಂದಾಗಿ ತತ್ತರಿಸಿದೆ. ಕೆಲವು ಸಂಘಟನೆಗಳು ಕೋವಿಡ್ ನಿಂದ ಮೃತಪಟ್ಟ ದೇಹಗಳನ್ನು ಜಾತಿ, ಧರ್ಮ ಭೇದವಿಲ್ಲದೆ ಮಾನವೀಯ ನೆಲೆಯಲ್ಲಿ ಅಂತ್ಯಸಂಸ್ಕಾರವನ್ನು ನಡೆಸುತ್ತಿರುವುದನ್ನು ಶರಣ್ ಕೆಟ್ಟ ದೃಷ್ಟಿಯಿಂದ ಕಾಣುತ್ತಿರುವುದು ಖಂಡನೀಯ. ಈ ಪರಿಸ್ಥಿತಿಯಲ್ಲಿ ಶರಣ್ ಪಂಪ್‌ವೆಲ್ ಸಮರ ಮಾಡಬೇಕಾಗಿರುವುದು ಇಲ್ಲಿನ ಅವ್ಯವಸ್ಥೆಯ ವಿರುದ್ಧ, ರೋಗಿಗಳಿಗೆ ವೆಂಟಿಲೇಟರ್ ಆಕ್ಸಿಜನ್ ಸಿಗದೆ ಇರುವುದರ ವಿರುದ್ಧ ಹೊರತು ಶವಸಂಸ್ಕಾರದ ವಿರುದ್ದ ಅಲ್ಲ ಎಂದು ಅಕ್ಷಿತ್ ಸುವರ್ಣ ತಿಳಿಸಿದ್ದಾರೆ.
ಹಿಂದೂ ಧರ್ಮೀಯರ ಶವಗಳನ್ನು ಮುಸ್ಲಿಮರು ಅಂತ್ಯಸಂಸ್ಕಾರ ಮಾಡಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಕೋಮು ಘರ್ಷಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಕ್ರಮ ಕೈಗೊಂಡು ಸಮಾಜದ ಶಾಂತಿ ಭಂಗಕ್ಕೆ ಅವಕಾಶ ನೀಡದಂತೆ ಅಕ್ಷಿತ್ ಸುವರ್ಣ ಆಗ್ರಹಿಸಿದ್ದಾರೆ.





