ಟ್ರಂಪ್ ಸಂಸತ್ ದಾಳಿಕೋರರಿಗೆ ಪ್ರಚೋದನೆ ನೀಡುತ್ತಿದ್ದರು: ಫೇಸ್ಬುಕ್ ನಿಗಾ ಮಂಡಳಿ ಉಪಾಧ್ಯಕ್ಷ

ವಾಶಿಂಗ್ಟನ್, ಮೇ 10: ಅಮೆರಿಕದ ಸಂಸತ್ ಮೇಲೆ ದಾಳಿ ನಡೆಸಿದವರನ್ನು ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿದರು, ಹಾಗಾಗಿ ಅವರು ಫೇಸ್ಬುಕ್ನ ನಿಷೇಧಕ್ಕೆ ಒಳಗಾದರು. ಆದರೆ, ಈಗ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ನ ನಿಯಮಗಳು ಡೋಲಾಯಮಾನವಾಗಿವೆ ಹಾಗೂ ಅವುಗಳನ್ನು ಗಟ್ಟಿಗೊಳಿಸುವ ಅಗತ್ಯವಿದೆ ಎಂದು ಫೇಸ್ಬುಕ್ನ ನಿಗಾ ಮಂಡಳಿಯ ಉಪಾಧ್ಯಕ್ಷ ಮೈಕಲ್ ಮೆಕಾನೆಲ್ ರವಿವಾರ ಹೇಳಿದ್ದಾರೆ.
ಜನವರಿ 6ರಂದು ನಡೆದ ಮಾರಕ ದಾಳಿಗೆ ಸಂಬಂಧಿಸಿ ಟ್ರಂಪ್ ನೀಡಿರುವ ಹೇಳಿಕೆಗಳಿಗಾಗಿ ಅವರನ್ನು ಮಾಧ್ಯಮದಿಂದ ನಿಷೇಧಿಸಲು ಫೇಸ್ಬುಕ್ ತೆಗೆದುಕೊಂಡಿರುವ ನಿರ್ಧಾರವು ಸರಿಯಾಗಿಯೇ ಇದೆ ಎಂಬುದಾಗಿ ಫೇಸ್ಬುಕ್ ಕೆಲ ದಿನಗಳ ಹಿಂದೆ ಹೇಳಿತ್ತು. ಆದರೆ, ಅವರನ್ನು ಯಾವತ್ತಾದರೂ ವಾಪಸ್ ತೆಗೆದುಕೊಳ್ಳಬಹುದೇ ಎಂಬುದಕ್ಕೆ ಸಂಬಂಧಿಸಿದ ನಿರ್ಧಾರವನ್ನು ಅದು ತೆಗೆದುಕೊಂಡಿಲ್ಲ.
ಶಾಂತಿ ಸ್ಥಾಪಿಸಲು ಮನವಿ ಮಾಡುವುದಕ್ಕಾಗಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದ್ದರೂ, ವಾಸ್ತವವಾಗಿ, ಅವರು ತನ್ನ ಹೇಳಿಕೆಗಳ ಮೂಲಕ ಹಿಂಸೆಯನ್ನು ಮುಂದುವರಿಸುವಂತೆ ತನ್ನ ಬೆಂಬಲಿಗರನ್ನು ಪ್ರಚೋದಿಸುತ್ತಿದ್ದರು ಎಂದು ಫೇಸ್ಬುಕ್ ನಿಗಾ ಮಂಡಳಿಯ ಉಪಾಧ್ಯಕ್ಷರು ರವಿವಾರ ಫಾಕ್ಸ್ನ್ಯೂಸ್ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.





