ಸರಕಾರದ ಹೊಸ ಲಾಕ್‌ಡೌನ್ ಜನತೆಯನ್ನು ಹಸಿವಿನಿಂದ ಸಾಯಿಸಲಿದೆ : ಡಿವೈಎಫ್ಐ
ಮಂಗಳೂರು, ಮೇ 10: ರಾಜ್ಯ ಸರಕಾರ ಘೋಷಿಸಿರುವ ಹೊಸ ಲಾಕ್‌ಡೌನ್ ನಿಯಮಗಳು ಅಪ್ರಾಯೋಗಿಕ ಮಾತ್ರವಲ್ಲ, ಅಮಾನವೀಯವೂ ಆಗಿದೆ. ಈ ನಿಯಮಗಳು ಪೊಲೀಸರ ಲಾಠಿಗಳಿಗೆ ಅಸಾಧಾರಣ ಶಕ್ತಿ ನೀಡುವುದಲ್ಲದೆ, ಜನಸಾಮಾನ್ಯರನ್ನು ಹಸಿವಿಗೆ ದೂಡಿ ಸಾಯಿಸಲಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನ ಸೋಂಕು ಹರಡುವಿಕೆ ತಡೆಯಲು ಸೋಂಕಿತರಿಗೆ ಚಿಕಿತ್ಸೆ ಒದಗಿಸಿ ಸಾವು ನೋವು ತಡೆಯಲು ಪೂರ್ಣವಾಗಿ ವಿಫಲಗೊಂಡಿರುವ ರಾಜ್ಯ ಸರಕಾರ ಕಳೆದ ಮೂರು ವಾರಗಳಿಂದ ಜನಸಂದಣಿ ತಡೆಯುವ ನಿಟ್ಟಿನಲ್ಲಿ ಹೊರಡಿಸುತ್ತಿರುವ ಆದೇಶಗಳಲ್ಲಿ ತಪ್ಪುಗಳ ಮೇಲೆ ತಪ್ಪು ಗಳನ್ನು ಎಸಗುತ್ತಿದೆ. ಹತ್ತಿರದ ರಾಜ್ಯ ಸರಕಾರಗಳ ಮಾದರಿಯನ್ನು ಅನುಸರಿಸಿ ಚಿಕಿತ್ಸೆ, ಪರಿಹಾರ, ನಿರ್ಬಂಧದಂತಹ ಪ್ರಾಯೋಗಿಕ ಕ್ರಮ ಗಳನ್ನು ಕೈಗೊಳ್ಳುವ ಬದಲು ಜನತೆಯನ್ನು ಮನೆಗಳಲ್ಲಿ ಕೂಡಿ ಹಾಕುವ, ಅಗತ್ಯ ವಸ್ತುಗಳ ಖರೀದಿ ಸಂದರ್ಭ ಜನಜಂಗುಳಿ ಸೇರುವಂತಹ ತಪ್ಪುಗಳನ್ನು ಎಸಗುತ್ತಾ ಬಂದಿದೆ. ಈಗಾಗಲೆ ರಾಜ್ಯದಲ್ಲಿ ಹಾಹಾಕಾರ ಎದ್ದಿದೆ. ಆಕ್ಸಿಜನ್, ಹಾಸಿಗೆ, ಚಿಕಿತ್ಸೆಗಳು ಇನ್ನೂ ಸರಿಯಾಗಿ ದೊರಕದ ದಯನೀಯ ಸ್ಥಿತಿ ಒಂದಾದರೆ ಔಷಧಿಗಳ ಕಾಲದಂಧೆ, ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಸಂತ್ರಸ್ತ ಜನತೆಯನ್ನು ಹೈರಾಣಾಗಿಸಿದೆ.
ಯಾವುದೇ ಪರಿಹಾರ ಪ್ಯಾಕೇಜ್‌ಗಳಿಲ್ಲದೆ ಜನತೆಯನ್ನು ಮನೆಗಳಲ್ಲಿ ಕೂಡಿಹಾಕುವ, ದುಡಿಮೆಯ ಅವಕಾಶ ನಿರಾಕರಿಸುವ ವಾರಾಂತ್ಯ ಕರ್ಫ್ಯೂ, ಜನತಾ ಕರ್ಫ್ಯೂಗಳು ಜನತೆಯ ಚೈತನ್ಯವನ್ನೇ ಕಡಿದು ಹಾಕಿದೆ. ಈಗ ಇವೆಲ್ಲದರ ಅತಿ ಎಂಬಂತೆ ಪೂರ್ಣ ಲಾಕ್‌ಡೌನ್ ಘೋಷಿಸಿ ಕೇವಲ ಕಾಲ್ನಡಿಗೆಯಲ್ಲಿ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಎಂದು ಆದೇಶಿಸಿರುವುದು ಜನತೆಯ ಬದುಕುವ ಹಕ್ಕಿಗೆ ಪೆಟ್ಟು ನೀಡಲಿದೆ.
ವಾಹನಗಳ ಬಳಕೆಗೆ ಅವಕಾಶ ನಿರಾಕರಣೆಯಿಂದ ವ್ಯಾಪಾರಿಗಳು ತಮ್ಮ ಮಳಿಗೆಗಳಿಗೆ ತಲುಪಲಾರದಂತೆ ಮಾಡಲಿದೆ. ಮಹಾ ನಗರಗಳ ಮುಖ್ಯ ಬಡಾವಣೆಗಳನ್ನು ಹೊರತು ಪಡಿಸಿ ಇತರೆಡೆ ಕೆಲವು ಅಗತ್ಯ ವಸ್ತುಗಳ ಮಳಿಗೆ, ಮಾರುಕಟ್ಟೆಗಳಿಗಾಗಿ ಕಿಲೋ ಮೀಟರ್ ದೂರ ಕ್ರಮಿಸಬೇಕಾಗುತ್ತದೆ. ಸಣ್ಣ ಪುಟ್ಟ ಪಟ್ಟಣ, ಗ್ರಾಮೀಣ ಭಾಗಗಳಲ್ಲಂತೂ ಕಾಲ್ನಡಿಗೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಅಂದರೆ ಗಂಟೆಗಟ್ಟಲೆ ನಡೆದು ಹೊತ್ತುಕೊಂಡು ಬರಬೇಕಾಗುತ್ತದೆ. ಇದು ಜನಸಾಮಾನ್ಯರನ್ನು ಅಗತ್ಯ ವಸ್ತುಗಳನ್ನು ಖರೀದಿಸದಂತೆ ನಿರ್ಬಂಧಿಸುತ್ತದೆ. ಜೊತೆಗೆ ಈ ಬಾರಿಯ ನಿಯಮಗಳು ನಿರ್ಮಾಣ ಕ್ಷೇತ್ರ ಸೇರಿದಂತೆ ಕೂಲಿ ಕೆಲಸಗಾರರು, ಆಟೊ, ಟೊಂಪೊಗಳಲ್ಲಿ ದುಡಿಯುವ ಶ್ರಮಿಕರ ದುಡಿಮೆಯ ಅಲ್ಪಸ್ವಲ್ಪ ಅವಕಾಶಗಳನ್ನು ಕಸಿದು ಹಾಕುತ್ತದೆ. ಪಡಿತರ ಸೇರಿದಂತೆ ಯಾವುದೆ ಪರಿಹಾರ ಪ್ಯಾಕೇಜ್ ನೀಡದೆ ಹೊರಡಿಸುವ ಇಂತಹ ಕ್ರಮಗಳು ಅಪ್ರಾಯೋಗಿಕವಾಗಿದೆ ಎಂದು ತಿಳಿಸಿದೆ.
ಹೊಸ ಲಾಕ್‌ಡೌನ್ ನಿಯಮಗಳು ಬಾಲಿಶತನದಿಂದ ಕೂಡಿದೆ. ಅಗತ್ಯ ವಸ್ತುಗಳ ಖರೀದಿಗೆ ಆಟೋ ಸಹಿತ ಖಾಸಗಿ ವಾಹನಗಳ ಬಳಕೆಗೆ ಅವಕಾಶ ಒದಗಿಸಬೇಕು. ಕೂಲಿಕಾರರ ದುಡಿಮೆಗೆ ಹಾಕಿರುವ ನಿರ್ಬಂಧಗಳನ್ನು ಸರಳಗೊಳಿಸಬೇಕು, ಪಡಿತರ ಸಾಮಾಗ್ರಿ, ಕೇರಳ ಮಾದರಿ ವಾರ್ಡ್, ಪಂಚಾಯತ್ ಮಟ್ಟದಲ್ಲಿ ಸಾಮುದಾಯಿಕ ಕಿಚನ್‌ಗಳ ಮೂಲಕ ಅಗತ್ಯ ಇರುವವರಿಗೆ, ಹಸಿದವರಿಗೆ ಸಿದ್ದಪಡಿಸಿದ ಆಹಾರ, ದುಡಿಮೆಯ ಅವಕಾಶ ಕಳೆದುಕೊಂಡವರಿಗೆ ನಗದು ಪರಿಹಾರಗಳುಲ್ಲ ಪರಿಹಾರ ಪ್ಯಾಕೇಜ್ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.







