ದ.ಕ.ಜಿಲ್ಲೆಯಲ್ಲಿ ಆಕ್ಸಿಜನ್, ಬೆಡ್, ಐಸಿಯು ಸಮಸ್ಯೆ ಆಗಲಿಲ್ಲ: ಸಂತೋಷ್ ಕುಮಾರ್ ರೈ
ಉಳ್ಳಾಲ : ದ.ಕ.ಜಿಲ್ಲೆಯಲ್ಲಿ ಆಕ್ಸಿಜನ್, ಬೆಡ್, ಐಸಿಯು ಸಮಸ್ಯೆ ಆಗಲಿಲ್ಲ. ಅತ್ಯುತ್ತಮ ಕೆಲಸ ಜಿಲ್ಲೆಯಲ್ಲಿ ನಡೆದಿದೆ. ಪ್ರತಿಯೊಂದು ವಿಚಾರಕ್ಕೂ ಒಬ್ಬೊಬ್ಬರಿಗೆ ಜವಾಬ್ದಾರಿ ನೀಡಲಾಗಿದೆ. ಎಂಟು ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿ ನೇಮಕ ಆಗಿದೆ. ಲಸಿಕೆ ವ್ಯವಸ್ಥೆ ಮಾಡಲಾಗಿದೆ ಎಂದು 'ಮೈಸೂರು ಎಲೆಕ್ಟ್ರಾನಿಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್' ಬೆಂಗಳೂರಿನ ಚೇರ್ ಮ್ಯಾನ್ ಸಂತೋಷ್ ಕುಮಾರ್ ರೈ ಬೋಳಿಯಾರ್ ತಿಳಿಸಿದ್ದಾರೆ.
ಬಿಜೆಪಿ ಮಂಗಳೂರು ಕ್ಷೇತ್ರದ ಕಾಪಿಕಾಡ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೊರೋನ ಎರಡನೆಯ ಅಲೆಯಲ್ಲಿ ಜನ ಭಯಭೀತರಾಗಿದ್ದರೂ ಮಾಜಿ ಆರೋಗ್ಯ ಸಚಿವ, ಶಾಸಕ ಯು.ಟಿ. ಖಾದರ್ ಅವರು ಕೊರೋನ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಬದಲು ನಿಸ್ವಾರ್ಥವಾಗಿ ದುಡಿಯುವ ಇತರ ಕ್ಷೇತ್ರದ ಬಿಜೆಪಿ ಜನಪ್ರನಿಧಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆರೋಪದ ಟ್ರೋಲ್ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಸಂತೋಷ್ ಕುಮಾರ್ ರೈ ಬೋಳಿಯಾರ್ ಆರೋಪಿಸಿದರು.
ಕ್ಷೇತ್ರದ ಶಾಸಕ ಕೆಲಸಕ್ಕಿಂತ ಹೆಚ್ಚು ಸುದ್ದಿ ಗೋಷ್ಠಿ ಮಾಡುತ್ತಾರೆ. ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳ ಕಡೆ ಗಮನ ಹರಿಸಿ ಕ್ಷೇತ್ರದ ಕೆಲಸ ಬಿಟ್ಟು ಉಳಿದವರ ಟೀಕೆ ಮಾಡಲು ಹೊರಟಿದ್ದಾರೆ. ಅವರು ಆರೋಗ್ಯ ಸಚಿವರಾಗಿದ್ದಾಗ ಅವರು ಮಾಡಿದ್ದು 20 ಬೆಡ್ ವ್ಯವಸ್ಥೆ ಮಾತ್ರ ಎಂದರು.
ಕೊರೋನ ಎರಡನೇ ಅಲೆಗೆ ಸಂಬಂಧಿಸಿದಂತೆ ಬಿಜೆಪಿ ಸರಕಾರ, ಅಧಿಕಾರಿಗಳು, ಸಚಿವರು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳು, ಕಾರ್ಯಕರ್ತರು ಸೇರಿದಂತೆ ಜಿಲ್ಲೆಯ ಒಂಬತ್ತು ಮಂಡಲಗಳಲ್ಲಿ ಪ್ರಮುಖರಿಗೆ ಜವಾಬ್ದಾರಿ ನೀಡಲಾಗಿದೆ. ಪ್ರತಿ ಆಸ್ಪತ್ರೆ, ಮಹಾ ಶಕ್ತಿ ಕೇಂದ್ರದಲ್ಲಿ ನೋಡೆಲ್ ಅಧಿಕಾರಿಯನ್ನು ನೇಮಿಸಿದ್ದರೂ, ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದರೂ, ಕೊರೋನ ಹರಡದಂತೆ ಅಂತರ ಕಾಪಾಡಲು ಪೊಲೀಸ್ ಇಲಾಖೆ ನಿರಂತರ ಜಾಗೃತಿ ಎಚ್ಚರಿಕೆ ಕಾರ್ಯಗಳನ್ನು ಮಾಡುತ್ತಿದ್ದರೂ ಖಾದರ್ ಅವರು ಮಾತ್ರ ಬಿಜೆಪಿ ಸರಕಾರದ ಕೆಲಸವನ್ನು ಮತ್ತು ಅಧಿಕಾರಿಗಳನ್ನು ದೂಷಿಸುತ್ತಾ ಗಂಭೀರ ಆರೋಪ ಮಾಡುತ್ತಾ ಸಾಗುತ್ತಿದ್ದು ಸಾಲದ್ದಕ್ಕೆ ಅವರ ಪಟಲಾಂಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ ಹಾಗೂ ನವೀನ್ ಪಾದಲ್ಪಾಡಿ, ಬಿಜೆಪಿ ಮಾಧ್ಯಮ ವಿಭಾಗದ ಅಜಿತ್ ಉಳ್ಳಾಲ್ ಹಾಗೂ ಆನಂದ ಶೆಟ್ಟಿ ಉಪಸ್ಥಿತರಿದ್ದರು.







