ಇಂಧನ ಬೆಲೆ ಮತ್ತೆ ಏರಿಕೆ; ಮಧ್ಯಪ್ರದೇಶ, ಮಹಾರಾಷ್ಟ್ರ ,ರಾಜಸ್ಥಾನದಲ್ಲಿ100ರ ಗಡಿ ದಾಟಿದ ಪೆಟ್ರೋಲ್
ಹೊಸದಿಲ್ಲಿ: ಈ ತಿಂಗಳಲ್ಲಿ ಆರನೇ ಬಾರಿ ಮಂಗಳವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ಮಹಾರಾಷ್ಟ್ರದ ನಾಂದೇಡ್ , ಮಧ್ಯಪ್ರದೇಶದ ರೇವಾ ಹಾಗೂ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಗಳಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದೆ.
ಸರಕಾರಿ ಸ್ವಾಮ್ಯದ ಇಂಧನ ರಿಟೈಲರ್ ಗಳ ಬೆಲೆ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 27 ಪೈಸೆ ಹಾಗೂ ಡೀಸೆಲ್ ಬೆಲೆ ಅನ್ನು 30 ಪೈಸೆ ಹೆಚ್ಚಿಸಿದೆ.
ಈ ಹೆಚ್ಚಳದಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದೇಶಾದ್ಯಂತದ ಗರಿಷ್ಠ ಮಟ್ಟಕ್ಕೆ ಏರಿದೆ. ದಿಲ್ಲಿಯಲ್ಲಿ ಈಗ ಪೆಟ್ರೋಲ್ ಪ್ರತಿ ಲೀಟರ್‌ಗೆ 91.80 ರೂ. ಹಾಗೂ ಡೀಸೆಲ್ ಬೆಲೆ 82.36 ರೂ.ಗೆ ಏರಿಕೆಯಾಗಿದೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭ ದರ ಪರಿಷ್ಕರಣೆಯಲ್ಲಿ 18 ದಿನಗಳ ವಿರಾಮವನ್ನು ಪಡೆದಿದ್ದ ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಮೇ 4 ರಂದು ಮೊದಲ ಬಾರಿ ಬೆಲೆ ಏರಿಕೆ ಮಾಡಿದ್ದು, ಇದೀಗ ಆರನೇ ಬಾರಿ ದರ ಏರಿಕೆ ಮಾಡಲಾಗಿದೆ.
ಬೆಲೆ ಏರಿಕೆಯು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಹೆಚ್ಚಿನ ಸ್ಥಳಗಳಲ್ಲಿ ಪೆಟ್ರೋಲ್ ದರ 100 ರೂ.ಗಳನ್ನು ದಾಟಲು ಕಾರಣವಾಗಿದೆ..
ಸ್ಥಳೀಯ ತೆರಿಗೆಗಳಾದ ವ್ಯಾಟ್ ಹಾಗೂ ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.