ಸೂಕ್ತ ಆರೈಕೆ, ಆಕ್ಸಿಜನ್ ದೊರಕದೆ ಪತಿ ಮೃತಪಟ್ಟರು, ಆ ವೇಳೆಯಲ್ಲೂ ನಾನು ಲೈಂಗಿಕ ಕಿರುಕುಳ ಅನುಭವಿಸಿದೆ: ಮಹಿಳೆಯ ಆರೋಪ

photo: indiatoday
ಹೊಸದಿಲ್ಲಿ: ಕೋವಿಡ್ ಚಿಕಿತ್ಸೆಗೆಂದು ತನ್ನ ಪತಿ ದಾಖಲಾದ ಭಗಲ್ಪುರ್ ಆಸ್ಪತ್ರೆಯ ಸಿಬ್ಬಂದಿಯ ವಿರುದ್ಧ ನಿರ್ಲಕ್ಷ್ಯ ಹಾಗೂ ಲೈಂಗಿಕ ಕಿರುಕುಳದ ಆರೋಪವನ್ನು ಬಿಹಾರದ ಭಗಲ್ಪುರದ ಮಹಿಳೆಯೊಬ್ಬರು ಹೊರಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೊಯ್ಡಾದಲ್ಲಿ ವಾಸವಾಗಿದ್ದ ಮಹಿಳೆ ಮತ್ತಾಕೆಯ ಪತಿ ಹೋಳಿ ಹಬ್ಬದ ಆಚರಣೆಗೆಂದು ಹುಟ್ಟೂರಾದ ಬಿಹಾರದ ಭಗಲ್ಪುರಕ್ಕೆ ಹೋಗಿದ್ದ ಸಂದರ್ಭ ಆಕೆಯ ಪತಿ ಅನಾರೋಗ್ಯಕ್ಕೆ ತುತ್ತಾಗಿದ್ದರೆನ್ನಲಾಗಿದೆ.
"15 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರೂ ಸೂಕ್ತ ಚಿಕಿತ್ಸೆ ಹಾಗೂ ಆಕ್ಸಿಜನ್ ದೊರೆಯದೆ ಪತಿ ಸಾವನ್ನಪ್ಪಿದ್ದಾರೆ" ಎಂದು ಆಕೆ ಆರೋಪಿಸಿದ್ದಾರೆ.
"ಭಗಲ್ಪುರದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ನನ್ನ ದುಪಟ್ಟಾ ಎಳೆದು ನನ್ನ ಸೊಂಟಕ್ಕೆ ಕೈಹಾಕಿ ನಂತರ ನನ್ನ ಪತಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ತಿಳಿಸಿದ್ದರು. ನನ್ನ ಪತಿ ಹಾಗೂ ತಾಯಿ ಆ ಆಸ್ಪತ್ರೆಯಲ್ಲಿದ್ದುದರಿಂದ ಎಲ್ಲಿ ಅವರಿಗೆ ತೊಂದರೆಯುಂಟಾಗುವುದೋ ಎಂದು ಸುಮ್ಮನಿದ್ದೆ" ಎಂದು ಆಕೆ ಹೇಳುತ್ತಿರುವುದು ಕೇಳಿಸುತ್ತದೆ.
ಪತಿಯ ಎರಡು ಕೋವಿಡ್ ಪರೀಕ್ಷೆಗಳು ನೆಗೆಟಿವ್ ಬಂದಿದ್ದರೂ ಸಿಟಿ ಸ್ಕ್ಯಾನ್ ಮಾಡಿದಾಗ ಶ್ವಾಸಕೋಶದಲ್ಲಿ ಸೋಂಕು ಪತ್ತೆಯಾಗಿತ್ತು ಎಂದು ಆಕೆ ಹೇಳಿದ್ದಾರೆ.
"ನಂತರ ಪತಿಯನ್ನು ಭಗಲ್ಪುರದ ಮಾಯಾಗಂಜ್ ಎಂಬಲ್ಲಿನ ಆಸ್ಪತ್ರೆಗೆ ಸೇರಿಸಲಾಯಿತಾದರೂ ಪ್ರಯೋಜನವಾಗಿಲ್ಲ, ನಂತರ ಪಾಟ್ನಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಸೂಕ್ತ ಆಕ್ಸಿಜನ್ ಮತ್ತು ಆರೈಕೆ ದೊರೆಯಲಿಲ್ಲ, 15 ದಿನಗಳ ಹೋರಾಟದ ನಂತರ ಪತಿ ಅಲ್ಲಿ ಮೃತಪಟ್ಟರು" ಎಂದು ಆಕೆ ವಿವರಿಸಿದ್ದಾರೆ.
"ಜನರು ಸಾಯುತ್ತಿದ್ದರೂ ಮಾಯಾಗಂಜ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ತಮ್ಮ ಕೊಠಡಿಗಳ ದೀಪ ಆರಿಸಿ ತಮ್ಮ ಮೊಬೈಲ್ ಫೋನುಗಳಲ್ಲಿ ಸಿನೆಮಾ ವೀಕ್ಷಿಸುತ್ತಿದ್ದರು, ಪಾಟ್ನಾದ ರಾಜೇಶ್ವರ್ ಆಸ್ಪತ್ರೆಯಲ್ಲಿ ಪತಿಗೆ ಪೂರೈಸಲಾಗುತ್ತಿದ್ದ ಆಕ್ಸಿಜನ್ ಕಡಿತಗೊಳಿಸಿದ್ದರಿಂದ ಕಾಳಸಂತೆಯಲ್ಲಿ ಸಿಲಿಂಡರ್ ಖರೀದಿಸಬೇಕಾಯಿತು, ಆಸ್ಪತ್ರೆ ರೂ 50,000ಕ್ಕೆ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡುತ್ತಿತ್ತು" ಎಂದು ಆಕೆ ಆರೋಪಿಸಿದ್ದಾರೆ.
ಈ ಆರೋಪಗಳ ತನಿಖೆಗೆ ತ್ರಿಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಭಗಲ್ಪುರ್ನ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
नीतीश जी
— Pappu Yadav (@pappuyadavjapl) May 10, 2021
इस बहन को न्याय दो, इनके पति कोरोना से दम तोड़ रहे थे, वासना के वहशी दरिंदे इनके साथ छेड़खानी कर रहे थे।
भागलपुर के ग्लोकल हॉस्पिटल का कंपाउंडर ज्योति कुमार और राजेश्वर हॉस्पिटल के डॉ अखिलेश को गिरफ्तार कर स्पीडी ट्रायल चला फांसी दो। मैं तो इन दोनों को सजा दिलाऊंगा! pic.twitter.com/Y2xLsklU0G