ಸಂಪೂರ್ಣ ಲಾಕ್‌ಡೌನ್: ವಸ್ತುಗಳ ಖರೀದಿಗೆ ವಾಹನ ಬಳಕೆಗೆ ಅವಕಾಶ

ಉಡುಪಿ, ಮೇ 11: ಸಂಪೂರ್ಣ ಲೌಕ್‌ಡೌನ್‌ನಲ್ಲಿ ಅಗತ್ಯ ವಸ್ತುಗಳ ಖರೀದಿಸಲು ವಾಹನ ಬಳಕೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯಾದ್ಯಂತ ಬೆಳಗ್ಗೆ 6ಗಂಟೆಯಿಂದ 10ಗಂಟೆಯವರೆಗೆ ವಾಹನ ಗಳ ಓಡಾಟ ಕಂಡುಬಂದವು.
ಉಡುಪಿ ನಗರದಲ್ಲಿ ಸೋಮವಾರಕ್ಕಿಂತ ಇಂದು ಜನ ಹಾಗೂ ವಾಹನ ಸಂಚಾರ ಸಾಕಷ್ಟು ವಿರಳವಾಗಿತ್ತು. ವಾಹನ ಬಳಕೆಗೆ ಅನುಮತಿ ನೀಡಿದರೂ ಜನ ಪೊಲೀಸರ ಭಯದಿಂದ ಹಾಗೂ ಹೆಚ್ಚಿನ ಅಂಗಡಿಗಳು ಬಂದ್ ಆಗಿರು ವುದರಿಂದ ಹೊರಗಡೆ ಬಂದಿಲ್ಲ. ಬೆಳಗ್ಗೆ 10ಗಂಟೆಯ ನಂತರ ಇಡೀ ಜಿಲ್ಲೆ ಸಂಪೂರ್ಣ ಬಂದ್ ಆಗಿತ್ತು.
ವಾಹನಗಳ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಕಲ್ಸಂಕ ಚೆಕ್‌ಪೋಸ್ಟ್ ನಲ್ಲಿ ಟ್ರಾಫಿಕ್ ಎಸ್ಸೈ ಅಬ್ದುಲ್ ಖಾದರ್, ಕುಕ್ಕಿಕಟ್ಟೆ ಚೆಕ್‌ಪೋಸ್ಟ್ ನಲ್ಲಿ ಟ್ರಾಫಿಕ್ ಎಸ್ಸೈ ಶೇಖರ್ ಹಾಗೂ ಸಂತೆಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ನಗರ ಠಾಣಾ ಎಸ್ಸೈ ವಾಸಪ್ಪ ನಾಯ್ಕ್ ನೇತೃತ್ವದಲ್ಲಿ ನಿಗಾ ವಹಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಂದ ದಂಡ ವಸೂಲಿ ಮಾಡಲಾಗಿದೆ.
ಸರಕಾರಿ ನೌಕರರು, ಆರೋಗ್ಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರ್ತವ್ಯ ಹಾಜರಾಗಲು ಅನುಕೂಲವಾಗುವಂತೆ ಉಡುಪಿ ಹಾಗೂ ಕುಂದಾಪುರ ಡಿಪೋದಿಂದ ಒಟ್ಟು ಏಳು ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಕಟ್ಟಡ ಕಾಮಗಾರಿಗೆ ಅವಕಾಶ ನೀಡಿದರೂ ವಲಸೆ ಕಾರ್ಮಿಕರ ಸಾಗಾಟಕ್ಕೆ ಅನುಮತಿ ಇಲ್ಲದ ಕಾರಣ ವಲಸೆ ಕಾರ್ಮಿಕರು ಕೆಲಸಕ್ಕಾಗಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ದೃಶ್ಯ ಕಂಡುಬಂತು.
ಜಿಲ್ಲೆಯಲ್ಲಿ 45 ವಾಹನಗಳು ವಶಕ್ಕೆ
ಉಡುಪಿ ಜಿಲ್ಲೆಯಲ್ಲಿ ಇಂದು ಅಗನತ್ಯವಾಗಿ ಓಡಾಟ ನಡೆಸುತ್ತಿದ್ದ ಓಟ್ಟು 45 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ.
ಒಟ್ಟು 34(ಉಡುಪಿ- 12, ಕುಂದಾಪುರ-18, ಕಾರ್ಕಳ-4) ದ್ವಿಚಕ್ರ ವಾಹನಗಳು ಮತ್ತು 11(ಕಾರು-10, ಕಾರ್ಕಳ-1) ಕಾರುಗಳನ್ನು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಲಾಗಿದೆ. ಉಡುಪಿ, ಕುಂದಾಪುರ ಹಾಗೂ ಕಾರ್ಕಳ ದಲ್ಲಿ ತಲಾ ಒಂದು ಕೋವಿಡ್ ನಿಯಮ ಉಲ್ಲಂಘನೆಯ ಪ್ರಕರಣ ದಾಖ ಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.







