ಈಶ್ವರಪ್ಪರ ಬಳಿ ಪ್ರಿಂಟ್ ಮಾಡಿದ ನೋಟ್ ಎಣಿಸುವ ಮಿಷನ್ ಇದೆ: ಶಿವಮೊಗ್ಗ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಿರೀಶ್

ಹೆಚ್.ಪಿ ಗಿರೀಶ್
ಶಿವಮೊಗ್ಗ, ಮೇ 11: ದುಡಿಯುವ ವರ್ಗಕ್ಕೆ ನಾವೇನು ಪ್ರಿಂಟ್ ಮಾಡುವ ಮಷಿನ್ ಇಟ್ಟುಕೊಂಡಿದ್ದೀವಾ ಎಂಬ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಶಿವಮೊಗ್ಗ ಯುವ ಕಾಂಗ್ರೆಸ್ ತಿರುಗೇಟು ನೀಡಿದೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಗಿರೀಶ್, ಸಚಿವ ಈಶ್ವರಪ್ಪನವರದ್ದು ಬಾಲಿಶ ಹೇಳಿಕೆ. ಆದರೂ ಅವರು ಹೇಳಿದ್ದರಲ್ಲಿ ಸತ್ಯವಿದೆ. ಅವರ ಬಳಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ. ಆದರೆ ಪ್ರಿಂಟಾದ ನೋಟ್ ಗಳನ್ನು ಎಣಿಸುವ ಮಿಷನ್ ಮಾತ್ರವಿದೆ ಎಂದು ಆರೋಪಿಸಿದರು.
ಜನರು ಕಟ್ಟಿದ ತೆರಿಗೆ ಹಣದಲ್ಲಿ ಜನರಿಗೆ ಪರಿಹಾರ ನೀಡುವಂತೆ ವಿರೋಧ ಪಕ್ಷದ ನಾಯಕರುಗಳು ಕೇಳುವುದು ತಪ್ಪಾ? ಜನ ಸಂಕಷ್ಟದಲ್ಲಿರುವಾಗ ಅವೈಜ್ಞಾನಿಕ ಲಾಕ್ ಡೌನ್ ಮಾಡಿಕೊಂಡು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಈಶ್ವರಪ್ಪ ಅವರು ಬಾಲಿಶ ಹೇಳಿಕೆ ನೀಡುವುದನ್ನು ಗಮನಿಸಿದರೆ ಇವರು ಅಧಿಕಾರ ನಡೆಸಲು ಅಸಮರ್ಥರು ಎಂದನಿಸುತ್ತದೆ. ಆದ್ದರಿಂದ ಸಚಿವ ಈಶ್ವರಪ್ಪನವರ ರಾಜೀನಾಮೆ ನೀಡಿ,ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಗಿರೀಶ್ ಟೀಕಿಸಿದ್ದಾರೆ.
ರಾಜ್ಯದ ಗೆದ್ದಂತಹ ಬಿಜೆಪಿ ಸಂಸದರು ರಾಜ್ಯಕ್ಕೆ ಬರಬೇಕಾ. ಕೇಂದ್ರ ಸರ್ಕಾರದ ಪರಿಹಾರವನ್ನು ಕೇಳದೆ ತಮ್ಮ ಬಾಯಿಗೆ ಬೀಗ ಜಡಿದು ಲಾಕ್ ಡೌನ್ ಮನಸ್ಥಿತಿಯಲ್ಲಿ ಇರುವುದನ್ನು ಕಂಡರೆ ರಾಜ್ಯವನ್ನೆ ಬೀಗ ಜಡಿಯಲು ಬಿಜೆಪಿ ಸರ್ಕಾರ ನಿರ್ಧರಿಸಿದೆ. ಕೊರೋನ ವೈರಸ್ ಗಿಂತ ಈ ಬಿಜೆಪಿ ಎಂಬ ವೈರಸ್ ಸರ್ಕಾರ ಅತಿ ಹೆಚ್ಚು ಅಪಾಯಕಾರಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.







